

ಹಾವೇರಿ: ನಗರದ ಹಾನಗಲ್ಲ ರಸ್ತೆ ಜಾನುವಾರು ಮಾರುಕಟ್ಟೆ ಬಳಿ ವೈಭವ ಲಕ್ಷ್ಮೀ ಪಾರ್ಕ್‌ನಲ್ಲಿ ಬುಧವಾರ ಬೆಳಗ್ಗೆ ಟಿಪ್ಪರ್- ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಧಾರುಣವಾಗಿ ಮೃತಪಟ್ಟಿದ್ದಾರೆ.
ಇಲ್ಲಿನ ಬಸವೇಶ್ವರ ನಗರದ ನಿವಾಸಿ ಅರುಣಕುಮಾರ ವೀರಣ್ಣ ಕೋರಿ (46) ಮೃತಪಟ್ಟ ಬೈಕ್ ಸವಾರ.
ಅರುಣಕುಮಾರ ಬೈಕ್‌ನಲ್ಲಿ ಪುತ್ರನನ್ನು ಶಾಲೆಗೆ ಬಿಟ್ಟು ಹಾವೇರಿ ಕಡೆಗೆ ವಾಪಸಾಗುತ್ತಿದ್ದರು. ಈ ವೇಳೆ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಬೈಕ್‌ಗೆ ತಾಗಿದೆ. ಬೈಕ್‌ನಿಂದ ಕೆಳಗೆ ಬಿದ್ದ ಅರುಣ ಅವರ ಮೈಮೇಲೆ ಟಿಪ್ಪರ್ ಹರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಶಹರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಚಾಲಕನ ಬಂಧನ
ಟಿಪ್ಪರ್ ವಶಪಡಿಸಿಕೊಂಡಿರುವ ಪೊಲೀಸರು, ಚಾಲಕ ನಾಗೇಂದ್ರಮಟ್ಟಿ ನಿವಾಸಿ ಅನ್ವರ್ ಅಲಿ ಬಂಕಾಪುರ ಎಂಬಾತನನ್ನು ಬಂಧಿಸಿದ್ದಾರೆ. ಈತ ಮರಳು ಸಾಗಿಸಿ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.