

ಹಾವೇರಿ: ದೈಹಿಕ ಚಟುವಟಕೆ ಕಡಿಮೆಯಾದಾಗ, ತೂಕ ಹೆಚ್ಚಾದಾಗ ಆರೋಗ್ಯಕರ ಆಹಾರ ಸೇವನೆ ಮಾಡದೇ ಇರುವುದು ಸೇರಿದಂತೆ ಹಲವಾರು ಕಾರಣಗಳಿಂದ ಮಧುಮೇಹ ಬರುತ್ತದೆ. ಹಾಗಾಗಿ, ಮಧುಮೇಹ ತಡೆಗೆ ತರಕಾರಿ, ಹಣ್ಣು ಸೇರಿದಂತೆ ಆರೋಗ್ಯಕರ ಆಹಾರ ಸೇವೆನೆ ಜತೆಗೆ ನಿಯಮಿತವಾಗಿ ವ್ಯಾಯಾಮ ರೂಢಿಸಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಹೇಳಿದರು.
ತಾಲೂಕಿನ ಕಬ್ಬೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಧುಮೇಹಿಗಳು ವೈದ್ಯರು ತಮಗೆ ನೀಡಿದ ಮಾತ್ರೆ ಹಾಗೂ ಇನ್ಸುಲಿನ್‌ಗಳನ್ನು ತಪ್ಪದೇ ತೆಗೆದುಕೊಳ್ಳಬೇಕು. ಸಕ್ಕರೆ ಕಾಯಿಲೆಗೆ ವ್ಯಾಯಾಮ ರಾಮಬಾಣದಂತಿದ್ದು, ನಿತ್ಯವೂ ತಪ್ಪದೇ ವ್ಯಾಯಾಮ, ನಡಿಗೆ ಮಾಡಿ ಎಂದು ಹೇಳಿದರು.
ಕೆಲಸದ ಒತ್ತಡದ ಮಧ್ಯೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. 30 ವರ್ಷದ ನಂತರ ವರ್ಷಕ್ಕೊಮ್ಮೆ ರಕ್ತ ಪರೀಸಿಕ್ಷಿಕೊಳ್ಳಬೇಕು. ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಶೃತಿ ಗೌಡರ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ರವಿ ಜೆ.ಬಿ., ಹಿ.ಪ್ರಾ.ಸುರಕ್ಷಾಧಿಕಾರಿ ರೇಖಾ ನಾಯ್ಕ, ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎನ್.ಪಾಟೀಲ, ಇತರರು ಉಪಸ್ಥಿತರಿದ್ದರು.