

ಹಾವೇರಿ: ನಗರದ ವೀರಭದ್ರೇಶ್ವರ ದೇವಸ್ಥಾನದ ಪಕ್ಕದ ನಾಟಕ ಪ್ರದರ್ಶನದ ವೇದಿಕೆಯಲ್ಲಿ ಜು.12ರಂದು ಮಧ್ಯಾಹ್ನ 3.15ಕ್ಕೆ ‘ಬಳೆಗಾರ ಹನುಮವ್ವ’ ಕೌಟುಂಬಿಕ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದು ತೆಗ್ಗಿಹಳ್ಳಿಯ ಸಂತ ಷರೀಫ ಶಿವಯೋಗಿ ನಾಟಕ ಸಂಘದ ಮಾಲೀಕ ಕತಾಲಸಾಬ ಬಣಗಾರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಮೊದಲ ನಾಟಕ ಕಂಪನಿ ಇದಾಗಿದೆ. ಮೂರು ತಿಂಗಳವರೆಗೆ ಬಳೆಗಾರ ಹನುಮವ್ವ ನಾಟಕ ಪ್ರದರ್ಶನ ಮಾಡಲಾಗುವುದು. ಪ್ರತಿದಿನ ಮಧ್ಯಾಹ್ನ 3.15 ಹಾಗೂ ಸಂಜೆ 6.15ಕ್ಕೆ ಎರಡು ಶೋ ಇರಲಿವೆ. ಶಾಸಕ ರುದ್ರಪ್ಪ ಲಮಾಣಿ ಉದ್ಘಾಟಿಸಲಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಇತರರು ಭಾಗವಹಿಸುವರು. ಹಾಸ್ಯಭರಿತ ಕೌಟುಂಬಿಕ ನಾಟಕ ವೀಕ್ಷಣೆ ಮಾಡಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ನಾಟಕದಲ್ಲಿ 20ಕ್ಕೂ ಹೆಚ್ಚು ಕಲಾವಿದರು ನಟಿಸಲಿದ್ದಾರೆ. ಕಳೆದ ಆರು ವರ್ಷಗಳಿಂದ ಈ ನಾಟಕ ಕಂಪನಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ವರ್ಷವಷ್ಟೇ ಕಾಯಕಲ್ಪ ಯೋಜನೆಯಡಿ ಅನುದಾನಕ್ಕೆ ಮನವಿ ಮಾಡಿದ್ದೇವೆ. ಇನ್ನು ನಾಟಕ ಪ್ರದರ್ಶನಕ್ಕೆ ವಿವಿಧ ಅನುಮತಿಗೆ ಅನುಮತಿಗೆ ಓಡಾಡುವುದೇ ಕಷ್ಟಕರವಾಗಿದ್ದು ಇದು ಸಿಂಗಲ್ ವಿಂಡೋ ಆಗಬೇಕಿದೆ ಎಂದರು.
ಈ ನಾಟಕವನ್ನು ಮಂಜುನಾಥ ಕುಂದೂರ ಬರೆದು ನಿರ್ದೆಶನ ಮಾಡಿದ್ದಾರೆ. ಕಿವುಡ ಮಾಡಿದ ಕಿತಾಪತಿ, ಧರ್ಮದೇವತೆ, ಎಚ್ಚರ ತಂಗಿ ಎಚ್ಚರ, ಯಾಕವ್ವ ಗರತಿ, ನನ್ಯಾಕ ಮರತಿ.. ಹೀಗೆ ಹತ್ತು ಹಲವು ಅಂದರೆ ಸುಮಾರು 30ಕ್ಕೂ ಹೆಚ್ಚು ವಿವಿಧ ನಾಟಕಗಳನ್ನು ಈ ತಂಡ ಪ್ರದರ್ಶಿಸಿದೆ. ಇದರಲ್ಲಿ ಅವಿನಾಶ ಅಕ್ಕಲಕೋಟೆ, ಪ್ರಿಯಾ ಅಕ್ಕಲಕೋಟೆ ಸೇರಿದಂತೆ ಹಲವು ಖ್ಯಾತನಾಮ ನಟರು ಅಭಿನಯಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೀರಭದ್ರಪ್ಪ ಬೆಳಗಾವಿ, ಮಹ್ಮದಹನೀಫ ಮುಲ್ಲಾ, ಇತರರಿದ್ದರು.
ಏಕಗವಾಕ್ಷಿ ಯೋಜನೆ ಬೇಕು
ಟಿವಿ, ಮೊಬೈಲ್ ಮಾದ್ಯಮದ ಹಾವಳಿಯ ಮಧ್ಯೆ ನಾಟಕ ರಂಗ, ವೃತ್ತಿ ರಂಗಭೂಮಿ ನಶಿಸುವ ಭೀತಿ ಎದುರಿಸುತ್ತಿದೆ. ಒಂದು ನಾಟಕ ಪ್ರದರ್ಶನದ ಮುನ್ನ ಹತ್ತಾರು ಇಲಾಖೆಗಳ ಅನುಮತಿ ಪಡೆಯಬೇಕಿರುವುದು ಸವಾಲಾಗಿದೆ. ಈ ಕುರಿತು ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸಂಘದ ವ್ಯವಸ್ಥಾಪಕ ಮಹಾಂತಗೌಡ ಬಿರಾದಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.