

ಹಾವೇರಿ: ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಮೂಲಕ ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಹಾವಳಿಯ ನಡುವೆಯೂ ವೃತ್ತಿರಂಗಭೂಮಿ ಈವರೆಗೆ ಜೀವಂತವಾಗಿದೆ. ಇದಕ್ಕೆ ಕಲಾ ಪೋಷಕರ ಶ್ರಮ ಕಾರಣ. ಸರ್ಕಾರ ನಾಟಕ ಕಂಪನಿಗಳಿಗೆ, ಕಲಾವಿದರಿಗೆ ಹೆಚ್ಚಿನ ಪೋತ್ಸಾಹ ನೀಡಬೇಕೆಂದು ಹರಸೂರು ಬಣ್ಣದಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು.
ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬಯಲು ಜಾಗದಲ್ಲಿ ತೆಗ್ಗಿಹಳ್ಳಿಯ ಶ್ರೀ ಸಂತ ಷರೀಫ ಶಿವಯೋಗಿ ನಾಟ್ಯ ಸಂಘದಿಂದ ಆಯೋಜಿಸಿರುವ ‘ಬಳೆಗಾರ ಹನುಮವ್ವ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ. ಪುರಾತನ ಕಾಲದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯವನ್ನು ನಾಟಕಗಳ ಮೂಲಕ ಎತ್ತಿ ತೊರಿಸಲಾಗುತ್ತಿತ್ತು. ನಾಟಕಗಳು ಕೇವಲ ಮನರಂಜನೆಯಲ್ಲ. ಅವುಗಳು ಪ್ರಸ್ತುತ ಸಮಾಜದ ಅಭಿವ್ಯಕ್ತಿಯಾಗಿ ಕೆಲಸ ಮಾಡುತ್ತವೆ. ಇತ್ತಿಚೀನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದ್ದು, ಹಾವೇರಿಯ ಕಲಾಪೋಷಕರು ನಾಟಕ ನೋಡುವ ಮೂಲಕ ಕಲಾವಿದರಿಗೆ, ಕಂಪನಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
ಜೂ.ರಾಜಕುಮಾರ ಅಶೋಕ ಬಸ್ತಿ ಮಾತನಾಡಿ, ‘ಕಾವ್ಯೇಶು ನಾಟಕಂ ರಮ್ಯಂ’ ಎನ್ನುವಂತೆ ಕಾವ್ಯಕ್ಕಿಂತ ನಾಟಕವು ರಮ್ಯವಾದದು. ಜಿಲ್ಲೆಯ ಜನತೆ ಕಲಾಪೋಷಕರಾಗಿದ್ದು, ಅವರ ಪ್ರೋತ್ಸಾಹದಿಂದ ನಾನು ದೇಶ-ವಿದೇಶಗಳಲ್ಲಿ ನಾಟಕ ಪ್ರದರ್ಶಿಸಲು ಸಾಧ್ಯವಾಗಿದೆ. ಜನತೆ ಹೆಚ್ಚೆಚ್ಚು ನಾಟಕ ನೋಡುವ ಮೂಲಕ ನಮ್ಮ ಜಿಲ್ಲೆಯ ಈ ನಾಟಕ ಕಂಪನಿಯ ಉಳಿವಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಪ್ರಮುಖರಾದ ಜಗದೀಶ ಕನವಳ್ಳಿ, ಉಮೇಶ ವಾಘ, ಹೊನ್ನಪ್ಪ ತಗಡಿನಮನಿ, ಅಶೋಕ ಮರಿಯಮ್ಮನವರ, ಎಸ್.ಜಿ.ಹೊನ್ನಪ್ಪನವರ, ಜಗದೀಶ ಸವಣೂರ, ರಾಜು ಕನವಳ್ಳಿ, ಮತ್ತಿತರರು ಉಪಸ್ಥಿತರಿದ್ದರು. ಕಂಪನಿಯ ಮಾಲೀಕ ಖತಾಲಸಾಬ ಬಣಗಾರ ಸ್ವಾಗತಿಸಿದರು. ಮಹಾಂತಗೌಡ ಪಾಟೀಲ ನಿರೂಪಿಸಿದರು.
ಮೊದಲ ಪ್ರದರ್ಶನ ಹೌಸಫುಲ್:
ಮೊದಲ ದಿನವೇ ‘ಬಳೆಗಾರ ಹನುಮವ್ವ’ ನಾಟಕ ಪ್ರದರ್ಶನ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದರು. ಮೊದಲ ಪ್ರದರ್ಶನವೇ ಹೌಸ್‌ಫುಲ್ ಆಗಿತ್ತು. ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದರು.