

ಕೇಶವಮೂರ್ತಿ ವಿ.ಬಿ. ಹಾವೇರಿ
ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆಯಾದರೂ ಒಂದಿಲ್ಲೊಂದು ಸಮಸ್ಯೆ ಮೂಲಕ ಸರ್ಕಾರಿ ಶಾಲೆಗಳು ಸೊರಗುತ್ತಿವೆ. ಇದಕ್ಕೆ ಶಿಕ್ಷಕರ ಕೊರತೆಯ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬರೊಬ್ಬರಿ 1,705 ಶಿಕ್ಷಕರ ಕೊರತೆ ಉಂಟಾಗಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.
1,705 ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣ ಇಲಾಖೆ ತಾತ್ಕಾಲಿಕವಾಗಿ ಪ್ರಾಥಮಿಕ ಶಾಲೆಗೆ 617 ಹಾಗೂ ಪ್ರೌಢಶಾಲೆಗೆ 152 ಅತಿಥಿ ಶಿಕ್ಷಕರನ್ನು ನೇಮಿಸಿದೆ. ಉಳಿದ ಶಿಕ್ಷಕರ ಕೊರತೆಯನ್ನು ಹೇಗೆ ನಿಭಾಯಿಸುವುದು ಎಂಬುದು ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಒಟ್ಟು 6,489 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಸದ್ಯ 4,996 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 1,493 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 483 ಶಿಕ್ಷಕರಿದ್ದು, 112 ಹುದ್ದೆಗಳು ಖಾಲಿ ಇವೆ. ಹಾನಗಲ್ಲ ತಾಲೂಕಿನಲ್ಲಿ 838 ಶಿಕ್ಷಕರಿದ್ದು, 374 ಹುದ್ದೆಗಳು ಖಾಲಿ ಇವೆ. ಹಾವೇರಿ ತಾಲೂಕಿನಲ್ಲಿ 813 ಶಿಕ್ಷಕರಿದ್ದು, 200 ಹುದ್ದೆ ಖಾಲಿ ಇವೆ, ಹಿರೇಕೆರೂರಲ್ಲಿ 840 ಶಿಕ್ಷಕರಿದ್ದು, 191 ಹುದ್ದೆ ಖಾಲಿ ಇವೆ. ರಾಣೆಬೆನ್ನೂರಲ್ಲಿ 941 ಶಿಕ್ಷಕರಿದ್ದು, 92 ಖಾಲಿ ಇವೆ. ಸವಣೂರಲ್ಲಿ 486 ಶಿಕ್ಷಕರಿದ್ದು, 247 ಹುದೆ ಖಾಲಿ ಇವೆ. ಶಿಗ್ಗಾಂವಿಯಲ್ಲಿ 595 ಶಿಕ್ಷಕರಿದ್ದು, 277 ಹುದ್ದೆ ಖಾಲಿ ಇವೆ.
ಸರ್ಕಾರಿ ಪ್ರೌಢಶಾಲೆಗಳಿಗೆ 1,331 ಹುದ್ದೆಗಳು ಮಂಜೂರಾಗಿದ್ದು, ಸದ್ಯಕ್ಕೆ 1,119 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. 212 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಬ್ಯಾಡಗಿ ತಾಲೂಕಿನಲ್ಲಿ 116 ಶಿಕ್ಷಕರಿದ್ದು, 13 ಹುದ್ದೆ ಖಾಲಿ ಇವೆ. ಹಾನಗಲ್ಲನಲ್ಲಿ 217 ಶಿಕ್ಷಕರಿದ್ದು 42 ಹುದ್ದೆ ಖಾಲಿ ಇವೆ. ಹಾವೇರಿಯಲ್ಲಿ 186 ಶಿಕ್ಷಕರಿದ್ದು, 26 ಹುದ್ದೆ ಖಾಲಿ ಇವೆ. ಹಿರೇಕೆರೂರಲ್ಲಿ 150 ಶಿಕ್ಷಕರಿದ್ದು, 11 ಹುದ್ದೆ ಖಾಲಿ ಇವೆ. ರಾಣೆಬೆನ್ನೂರಲ್ಲಿ 154 ಶಿಕ್ಷಕರಿದ್ದು, 1 ಖಾಲಿ ಇವೆ. ಸವಣೂರಲ್ಲಿ 137 ಶಿಕ್ಷಕರಿದ್ದು 61 ಹುದ್ದೆ ಖಾಲಿ ಇವೆ. ಶಿಗ್ಗಾಂವಿಯಲ್ಲಿ 149 ಶಿಕ್ಷಕರಿದ್ದು, 52 ಹುದ್ದೆ ಖಾಲಿ ಇವೆ.
ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಬಿಸಿಯೂಟ, ಶೂ, ಸಾಕ್ಸ್, ವಿದ್ಯಾರ್ಥಿ ವೇತನದಂತಹ ಅನೇಕ ಕೊಡುಗೆಗಳನ್ನು ನೀಡಿದ್ದರೂ ಸಹ ಶಿಕ್ಷಕರ ಕೊರತೆ ವಿದ್ಯಾರ್ಥಿಗಳ ಹಿನ್ನೆಡೆಗೆ ಮುನ್ನುಡಿಯಾಗುವ ಆತಂಕ ಪಾಲಕರಲ್ಲಿದೆ. ಇಷ್ಟೊಂದು ಪ್ರಮಾಣಿದ ಶಿಕ್ಷಕರ ಕೊರತೆ ಇರುವುದರಿಂದ ಸರ್ಕಾರಿ ಶಾಲೆಗಳ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವ ಭೀತಿ ಎದುರಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಗಮನ ಹರಿಸಬೇಕು. ಶಿಕ್ಷಕರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.
ಕೋಟ್:
ಶಿಕ್ಷಕರ ಕೊರತೆ ಸಮಸ್ಯೆ ನೀಗಿಸಲು ಪ್ರಾಥಮಿಕ ಶಾಲೆಗೆ 617 ಹಾಗೂ ಪ್ರೌಢಶಾಲೆಗೆ 152 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ತಾಲೂಕಾವಾರು ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚೇನು ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಬಿ.ಎಸ್.ಜಗದೀಶ್ವರ, ಡಿಡಿಪಿಐ