ಹಾವೇರಿ: ಎನ್‌ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ) ರದ್ದುಪಡಿಸಿ ಒಪಿಎಸ್ (ಹಳೇ ಪಿಂಚಣಿ ಯೋಜನೆ) ಜಾರಿಗೆ ಆಗ್ರಹಿಸಿ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ವತಿಯಿಂದ ಹಮ್ಮಿಕೊಂಡಿರುವ ಭಾರತ ಯಾತ್ರೆ ಸೆ.22ರಂದು ಜಿಲ್ಲೆಗೆ ಆಗಮಿಸಲಿದೆ.
ಸೆ.22ರಂದು ಸಂಜೆ 4 ಗಂಟೆಗೆ ಸವಣೂರ ಪ್ರವೇಶಿಸಿ, ಮೋತಿ ತಲಾಬ್ ಸರ್ಕಲ್‌ನಿಂದ ಪ್ರವಾಸಿ ಮಂದಿರವರೆಗೆ ರ‌್ಯಾಲಿ ನಡೆಯಲಿದೆ. ಸೆ.23ರಂದು ಬೆಳಗ್ಗೆ 10 ಗಂಟೆಗೆ ಹಾವೇರಿಯ ಜಿಲ್ಲಾ ಗುರು ಭವನದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಗೆ ಹಾನಗಲ್ಲ ನಗರ ಪ್ರವೇಶಿಸಲಿದೆ. ಕುಮಾರೇಶ್ವರ ವಿರಕ್ತ ಮಠದಿಂದ ಸರ್ಕಾರಿ ಶಾಸಕರ ಮಾದರಿ ಶಾಲೆವರೆಗೆ ರ‌್ಯಾಲಿ ನಡೆಯಲಿದೆ. ನಂತರ ಶಾಲಾ ಮೈದಾನದಲ್ಲಿ ಬಹಿರಂಗ ಸಭೆ ಜರುಗಲಿದೆ. ಫೆಡರೇಷನ್ ಅಧ್ಯಕ್ಷ ರಾಮಪಾಲ್ ಸಿಂಗ್, ರಾಜ್ಯಾಧ್ಯಕ್ಷ ಕೆ.ನಾಗೇಶ, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಬಿದರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.