

ಹಾವೇರಿ: ಕ್ಷಯ ಗಂಭೀರ ಖಾಯಿಲೆಯಾಗಿದ್ದು, ಜಿಲ್ಲೆಯಲ್ಲಿ ಕ್ಷಯ ರೋಗ ತಡೆಗೆ ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸಬೇಕು. ಜತೆಗೆ ಕ್ಷಯ ಮುಕ್ತ ಜಿಲ್ಲೆಗೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಕ್ಷಯರೋಗ ಆಂದೋಲನ ಕುರಿತ ವಿಶೇಷ ಜಿಲ್ಲಾ ಮಟ್ಟದ ಕ್ಷಯರೋಗ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷಯರೋಗದ ಲಕ್ಷಣಗಳು ಹಾಗೂ ಕ್ಷಯ ರೋಗ ಗುಣಪಡಿಸಲು ಇರುವ ಸೌಲಭ್ಯಗಳ ಕುರಿತು ನಗರ ಹಾಗೂ ಗ್ರಾಮೀಣ ಭಾಗದ ಜನಸಂದಣಿ ಪ್ರದೇಶಗಳಲ್ಲಿ ಆರೋಗ್ಯ ಅರಿವು ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಆರಂಭದಲ್ಲೇ ರೋಗ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು. ಈ ಕಾರ್ಯಕ್ಕೆ ಸಂಘ-ಸಂಸ್ಥೆಗಳ ಸಹಯೋಗ ಪಡೆದುಕೊಳ್ಳಬೇಕು. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ಜತೆಗೆ ಸಾಮಾಜಿಕ ಜಾಲತಣಗಳ ಮೂಲಕ ಕ್ಷಯರೋಗ ತಗಡೆಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಪೌಷ್ಠಿಕ ಆಹಾರದ ಕಿಟ್ ನೀಡಲು ಸಂಘ-ಸಂಸ್ಥೆಗಳ ಸಹಯೋಗ ಪಡೆದುಕೊಳ್ಳಬೇಕು. ಇಲಾಖೆ ಅಧಿಕಾರಿಗಳು ಸಹ ಕ್ಷಯರೋಗಿಗಳನ್ನು ದತ್ತು ಪಡೆದುಕೊಂಡು ಆರು ತಿಂಗಳ ಕಾಲ ಪೌಷ್ಠಿಕ ಆಹಾರ ಕಿಟ್ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಎಚ್.ಐ.ವಿ. ಸೋಂಕಿತರು ಹಾಗೂ ಬಾಧಿತರಿಗೆ ಅಗತ್ಯ ಸೇವೆಗಳನ್ನು ಆದ್ಯತೆ ಮೇರೆಗೆ ನೀಡಬೇಕು. ಆಸ್ಪತ್ರೆಗಳಲ್ಲಿ ಅವರಿಗೆ ಅಗತ್ಯ ಔಷಧೋಪಚಾರ ಹಾಗೂ ಚಿಕಿತ್ಸೆ ನೀಡಬೇಕು. ಜತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು. ಎಚ್.ಐ.ವಿ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನೀಲೇಶ ಎಂ.ಎನ್. ಮಾತನಾಡಿ, ಈಗಾಗಲೇ ರಾಷ್ಟ್ರೀಯ ಕ್ಷಯರೋಗ ಕಾರ್ಯಕ್ರಮದಡಿ ಶತದಿನದ ಟಿಬಿ ಆಂದೋಲನ ಡಿ.7ರಿಂದ ಮಾರ್ಚ್ 17ರವರೆಗೆ ಹಮ್ಮಿಕೊಳ್ಳಲಾಗಿದೆ. ನಿ-ಕ್ಷಯ್ ಉಚಿತ ಸಹಾಯವಾಣಿ 1800-11-6666 ಸಂಪರ್ಕಿಸಲು ಸಹ ಅರಿವು ಮೂಡಿಸಲಾಗುತ್ತಿದೆ. ಜ.16ರಿಂದ 24ರವರೆಗೆ ಶಾಲಾ-ಕಾಲೇಜ್‌ಗಳಲ್ಲಿ ಜಾಗೃತಿ ಶಿಬಿರ, ಜ.27ರಿಂದ ಫೆಬ್ರುವರಿ 2ರವರೆಗೆ ಎಲ್ಲ ಇಲಾಖೆಗಳಲ್ಲಿ ನಿ-ಕ್ಷಯ್ ಸಪ್ತಾಹ, ಫೆ.3ರಿಂದ 15ರವರೆಗೆ ನಿ-ಕ್ಷಯ್ ಸರ್ವಿಸ್, ಫೆ.15ರಿಂದ 28ರವರೆಗೆ ಮಾಧ್ಯಮದವರಿಗೆ ಕಾರ್ಯಾಗಾರ, ಪ್ರದೇಶ ಭೇಟಿ ಹೀಗೆ ಮಾರ್ಚ್ 17ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಎಂ.ಎಸ್., ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಇತರರು ಉಪಸ್ಥಿತರಿದ್ದರು.
1,585 ರೋಗಿಗಳು ಪತ್ತೆ
2024ರ ಜನವರಿಯಿಂದ ನವೆಂಬರ್‌ವರೆಗೆ 1,585 ಕ್ಷಯರೋಗಿಗಳನ್ನು ಪತ್ತೆಹಚ್ಚಲಾಗಿದ್ದು, ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. 2023ರಲ್ಲಿ 1,780 ಕ್ಷಯ ರೋಗಿಗಳನ್ನು ಪತ್ತೆಹಚ್ಚಿ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 135 ಜನರು ನಿಧನವಾಗಿದ್ದಾರೆ ಎಂದು ಡಾ.ನೀಲೇಶ ಎಂ.ಎನ್. ತಿಳಿಸಿದರು.
ಏಡ್ಸ್ ಸೋಂಕಿತರಿಗೆ ವಸತಿ ಸೌಕರ್ಯ
ಜಿಲ್ಲೆಯಲ್ಲಿ ವಸತಿ ಯೋಜನೆಯಡಿ 32 ಎಚ್.ಐ.ವಿ. ಸೋಂಕಿತರಿಗೆ ಮನೆ ಮಂಜೂರು ಮಾಡಲಾಗಿದೆ. ಧನಶ್ರೀ ಯೋಜನೆಯಡಿ 130 ಎಚ್.ಐ.ವಿ. ಸೋಂಕಿತರು ಸಹಾಯಧನ ಸೌಲಭ್ಯ ಪಡೆದುಕೊಂಡಿದ್ದಾರೆ. ವಿಶೇಷ ಪಾಲನಾ ಯೋಜನೆಯಡಿ 814 (ಸೊನ್ನೆಯಿಂದ 18 ವರ್ಷದೊಳಗಿನ) ಎಚ್.ಐ.ವಿ. ಸೋಂಕಿತ ಬಾಧಿತ ಮಕ್ಕಳಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡಲಾಗುತ್ತಿದೆ ಎಂದು ಡಾ.ನೀಲೇಶ ವಿವರಿಸಿದರು.