ಜಿಲ್ಲಾ ತಾಯಿ- ಮಕ್ಕಳ ಆಸ್ಪತ್ರೆಗೆ ಲಕ್ಷೃ ಪ್ರಶಸ್ತಿಯ ಗರಿ; ಗುಣಮಟ್ಟದ ಚಿಕಿತ್ಸೆಗೆ ಒಲಿದ ರಾಷ್ಟ್ರಮಟ್ಟದ ಗೌರವ

7 Herige Hospital
Published on

ಹಾವೇರಿ: ಗುಣಮಟ್ಟದ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರದಿಂದ ಲಕ್ಷ್ಯ ಕಾರ್ಯಕ್ರಮದಡಿ ನೀಡಲಾಗುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ನಗರದ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಭಾಜನವಾಗಿದೆ. ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಆಸ್ಪತ್ರೆಗೆ ಹೆಚ್ಚುವರಿಯಾಗಿ ಅಗತ್ಯ ಮೂಲ ಸೌಕರ್ಯ ಒದಗಿಸಲು ಹೆರಿಗೆ ಕೊಠಡಿ ಹಾಗೂ ಹೆರಿಗೆ ಶಸ್ತ್ರ ಚಿಕಿತ್ಸಾ ಕೊಠಡಿಗೆ ತಲಾ ಮೂರು ಲಕ್ಷದಂತೆ ಒಟ್ಟು ಆರು ಲಕ್ಷ ರೂ. ಬಹುಮಾನ ನೀಡಲಾಗುತ್ತಿದೆ.
ಜಿಲ್ಲಾ ಆಸ್ಪತ್ರೆ ಹೆರಿಗೆ ವಿಭಾಗ ಗುಣಮಟ್ಟದ ಚಿಕಿತ್ಸೆ ನೀಡಿರುವ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಜನರ ಗಮನ ಸೆಳೆದಿದೆ. ಗುಣಮಟ್ಟದ ಸೇವೆ ಹಾಗೂ ಹೆರಿಗೆ ಸಮಯದಲ್ಲಿ ಸಂಭವಿಸುವ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಲಕ್ಷ್ಯ ಕಾರ್ಯಕ್ರಮದ ಉದ್ದೇಶವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ತಿಂಗಳಿಗೆ 500ಕ್ಕಿಂತ ಹೆಚ್ಚು ಹೆರಿಗೆಗಳಾಗುತ್ತಿದ್ದು, ಅದರಲ್ಲಿ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವು ಕಡಿಮೆ ಇದೆ. ನಿತ್ಯವೂ ಸುಮಾರು 300ಕ್ಕಿಂತ ಹೆಚ್ಚು ಹೊರ ರೋಗಿಗಳನ್ನು ಇಲ್ಲಿ ಪರೀಕ್ಷಿಸಲಾಗುತ್ತಿದೆ.
ಲಕ್ಷ್ಯ ಕಾರ್ಯಕ್ರಮದಡಿ ಹೆರಿಗೆ ಕೊಠಡಿ ಹಾಗೂ ಹೆರಿಗೆ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ತಂಡಗಳು ಮೂರು ಹಂತದಲ್ಲಿ ಮೌಲ್ಯಮಾಪನ ಮಾಡಿ ಪ್ರತಿ ಹಂತದಲ್ಲಿ ಶೇ.70ಕ್ಕೂ ಹೆಚ್ಚು ಅಂಕ ಗಳಿಸಿದ ಆಸ್ಪತ್ರೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. 2023 ಮಾರ್ಚ್ 3 ಮತ್ತು 4ರಂದು ರಾಷ್ಟ್ರ ಮಟ್ಟದ ತಂಡ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ಮೌಲ್ಯಮಾಪನ ಮಾಡಿದೆ. ಈ ವೇಳೆ ಆಸ್ಪತ್ರೆ ಶೇ.85ರಷ್ಟು ಅಂಕ ಗಳಿಸಿದ್ದರಿಂದ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಜಿಲ್ಲಾಡಳಿತಕ್ಕೆ, ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net