

ಹಾವೇರಿ: ರಾಜ್ಯದಲ್ಲಿ ಟ್ಯಾಕ್ಸಿಗಳಿಗೆ ಅಳವಡಿಸಲು ಸೂಚಿಸಿರುವ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ವ್ಯವಸ್ಥೆಯನ್ನು ಕೈಬಿಡುವಂತೆ ಆಗ್ರಹಿಸಿ ಶ್ರೀ ಶಿವಲಿಂಗೇಶ್ವರ ಟ್ಯಾಕ್ಸಿ ಚಾಲಕರ ಸಂಘದ ನೇತೃತ್ವದಲ್ಲಿ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಜನರು ಸುಗಮವಾಗಿ ಊರಿಂದ ಊರಿಗೆ ಹೋಗಿ ಬರಲು ಇರುವ ಟ್ಯಾಕ್ಸಿ ವ್ಯವಸ್ಥೆಯನ್ನು ದಿನದಿಂದ ದಿನಕ್ಕೆ ಸರ್ಕಾರಗಳು ಹೆಚ್ಚಿನ ಸೌಲಭ್ಯ ಮತ್ತು ಸುರಕ್ಷತೆ ಹೆಸರಿನಲ್ಲಿ ಹೊರೆಯಾಗಿಸುತ್ತಿವೆ. ಇದರಿಂದ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಆರ್ಥಿಕವಾಗಿ ಹೆಚ್ಚು ನಷ್ಟ ಅನುಭವಿಸುವಂತಾಗಿದೆ. ಆದಾಯವಿಲ್ಲದೇ ಜೀವನ ನಡೆಸುವುದೇ ಕಷ್ಟವಾಗಿದೆ. ಕೇವಲ ಟ್ಯಾಕ್ಸಿ ನಂಬಿಕೊಂಡು ನಮ್ಮ ಕುಟುಂಬಗಳನ್ನು ಸಲುಹುತ್ತಿದ್ದೇವೆ. ಕೂಡಲೇ ಅವೈಜ್ಞಾನಿಕ ವ್ಯವಸ್ಥೆ ಎನಿಸಿರುವ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ವ್ಯವಸ್ಥೆ ಕೈಬಿಡಬೇಕೆಂದು ಎಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದರು.
2019ರಲ್ಲಿ ವಿಶ್ವವನ್ನೇ ಕಾಡಿದ ಕರೊನಾ ನಂತರದಲ್ಲಿ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸ್ಥಿತಿ ಗಂಭೀರವಾಗಿದೆ. ಅಲ್ಲದೇ ಈಗಾಗಲೇ ಒಂದು ವರ್ಷದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದಾಗಿ ಟ್ಯಾಕ್ಸಿಗಳ ಬಳಕೆ ಶೇ.90ರಷ್ಟು ಕುಂಠಿತಗೊಂಡಿದೆ. ಕೂಡಲೇ ರಾಜ್ಯ ಸರ್ಕಾರ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಕುಟುಂಬ ನಿರ್ವಹಣೆಗೆ ಪರ್ಯಾಯ ಮಾರ್ಗಗಳನ್ನು ರೂಪಿಸಬೇಕು. ಈ ಮೂಲಕ ಆರ್ಥಿಕತೆ ಸುಧಾರಣೆಗೆ ಕ್ರಮಗಳು ತುರ್ತಾಗಿ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಹಾವೇರಿ ನಗರದಲ್ಲಿ ಟ್ಯಾಕ್ಸಿ ವಾಹನಗಳ ನಿಲುಗಡೆ ಮಾಡಲು ಸೂಕ್ತ ಜಾಗದ ವ್ಯವಸ್ಥೆ ಇಲ್ಲ. ಕೂಡಲೇ ಶ್ರೀ ಶಿವಲಿಂಗೇಶ್ವರ ಟ್ಯಾಕ್ಸಿ ಚಾಲಕರ ಸಂಘಕ್ಕೆ ಸರ್ಕಾರಿ ನಿವೇಶನ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ದಳಗಾರ, ಮಂಜುನಾಥ ಆವಕ್ಕನವರ, ಗಣೇಶ ಗುಂಜಳ, ಗಣೇಶ ದಂಡೆಮ್ಮನವರ, ಜಗದೀಶ ಸುಣಗಾರ, ಬಸನಗೌಡ್ರ ಪಾಟೀಲ, ಮುತ್ತು ಬಡಿಗೇರ, ಅಜೇಯ ರಜಪೂತ, ಅಶೋಕ ನರಗುಂದ, ದ್ಯಾಮಣ್ಣ ಕೊಟ್ಟೂರ, ಗಿರೀಶ ಬೆನ್ನೂರ, ಪ್ರಕಾಶ ನಂದಿ, ಮತ್ತಿತರರು ಇದ್ದರು.
ಉಬರ್, ಓಲಾ ಬೇಡ
ದಿನದಿಂದ ದಿನಕ್ಕೆ ಡಿಸೇಲ್, ಪೆಟ್ರೋಲ್, ಸಿಎನ್‌ಜಿ ದರ ಏರಿಕೆಯಾಗುತ್ತಿದೆ. ಇನ್ನು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್, ಪ್ಯಾನಿಕ್ ಬಟನ್, ಜಿಪಿಎಸ್‌ಗಳ ಕಡ್ಡಾಯ ಅಳವಡಿಕೆ, ಇನ್ಸೂರೆನ್ಸ್ ಮತ್ತು ಟ್ಯಾಕ್ಸ್ ಮತ್ತು ಟೋಲ್ ದರಗಳಲ್ಲಿ ಏರಿಕೆ ಮಾಡುತ್ತಿರುವುದು ಹೊರೆಯಾಗುತ್ತಿದೆ. ಓಲಾ ಮತ್ತು ಉಬರ್‌ಗಳಂತಹ ಸೇವೆಗಳನ್ನು ಬೆಂಗಳೂರಿನ ಐಟಿ, ಬಿಟಿಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಟ್ಯಾಕ್ಸಿ ಚಾಲಕರು ಒತ್ತಾಯಿಸಿದರು.