ಮೊಬೈಲ್ ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ಮಾಡಿ; ತಹಸೀಲ್ದಾರ್ ಶರಣಮ್ಮ ಕಾರಿ

Published on

ಹಾವೇರಿ: ರೈತರು ತಮ್ಮ ಮೊಬೈಲ್‌ನ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಬೆಳೆ ಸಮೀಕ್ಷೆ ರೈತರ ಆ್ಯಪ್ ಡೌನ್‌ಲೊಡ್ ಮಾಡಿಕೊಂಡು ಬೆಳೆ ವಿವರಗಳನ್ನು ದಾಖಲಿಸಬೇಕು ಎಂದು ತಹಸೀಲ್ದಾರ್ ಶರಣಮ್ಮ ಕಾರಿ ಹೇಳಿದರು.

ನಗರದ ಹಾವೇರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪ್ರಸಕ್ತ 2025-26ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಮುಂಗಾರು ರೈತರ ಜಮೀನಿನ ಬೆಳೆ ವಿವರಗಳನ್ನು ದಾಖಲಿಸುವ ಕುರಿತು ಸಮೀಕ್ಷೆಗಾರರಾದ ಪಿ.ಆರ್.ಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಗ್ರಾಮಕ್ಕೆ ನೇಮಿಸಲಾಗಿರುವ ಖಾಸಗಿ ನಿವಾಸಿಗಳು ರೈತರ ಜಮೀನುಗಳಿಗೆ ತೆರಳಿ ಬೆಳೆ ವಿವರ ದಾಖಲಿಸಬೇಕು. ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆವಿಮೆ ಇತ್ಯರ್ಥ ಪಡಿಸಲು, ಬೆಳೆನಷ್ಟ ಪರಿಹಾರ ನೀಡಲು, ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನಗಳನ್ನು ಖರೀದಿಸಲು ಮತ್ತು ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಒದಗಿಸಲು ಹಾಗೂ ಜಮೀನಿನ ಉತಾರದಲ್ಲಿ ಬೆಳೆ ವಿವರ ನಮೂದಿಸಲು ಬಳಸಲಾಗುತ್ತದೆ ಎಂದರು.

ರೈತರು ದಾಖಲಿಸಿದ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೇಲ್ವಿಚಾರಕರುಗಳಿಂದ ಪರಿಶೀಲಿಸಿ ದೃಢೀಕರಿಸಲಾಗುವುದು. ರೈತರು ದಾಖಲಿಸಿದ ಬೆಳೆ ವಿವರ ಮಾಹಿತಿಯನ್ನು ಬೆಳೆ ದರ್ಶಕ ಮೊಬೈಲ್ ಆ್ಯಪ್ ನಲ್ಲಿ ಎಲ್ಲರೂ ವೀಕ್ಷಿಸಬಹುದಾಗಿದೆ. ಆಕ್ಷೇಪಣೆ ಇದ್ದಲ್ಲಿ ರೈತರು ಜು.30ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಂದಾಯ, ಕೃಷಿ. ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್, ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ತೊಟಗಾರಿಕೆ ಅಧಿಕಾರಿಗಳು, ಆತ್ಮ ಯೋಜನೆಯ ಅಧಿಕಾರಿಗಳು ಹಾಗೂ ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net