

ಹಾವೇರಿ: ನಗರದ ತಹಸೀಲ್ದಾರ್ ಕಚೇರಿ ಕಟ್ಟಡದ ಮೇಲ್ಛಾವಣಿ ಸೋರಿಕೆ ತಡೆಗಟ್ಟುವುದು ಸೇರಿದಂತೆ ಕಟ್ಟಡದ ದುರಸ್ತಿಗಾಗಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 8 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗುವುದು ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ಕಟ್ಟಡದ ಮೇಲ್ಛಾವಣಿ ಸೋರುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಮೊದಲ ಮಹಡಿಯಲ್ಲಿನ ಭೂದಾಖಲೆ ಇಲಾಖೆ ಕಚೇರಿಯಲ್ಲಿ ಮಳೆ ನೀರು ಸೋರುತ್ತಿರುವುದನ್ನು ಗಮನಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕಟ್ಟಡ ದುರಸ್ತಿಗೆ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 8 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗುವುದು. ಕಟ್ಟಡ ಮೇಲ್ಛಾವಣಿಯಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ಹಾಗೂ ಕೂಡಲೇ ದುರಸ್ತಿ ಆರಂಭಿಸಿ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭೂದಾಖಲೆ ಕೊಠಡಿ, ಅಭಿಲೆಖಾಲಯ ಕೊಠಡಿ, ಎಡಿಎಲ್‌ಆರ್ ಸೇರಿದಂತೆ ವಿವಿಧ ವಿಭಾಗಗಳ ಕೊಠಡಿಗಳ ಪರಿಶೀಲನೆ ನಡೆಸಿದ ಅವರು, ಕಂದಾಯ ಇಲಾಖೆಯ ದಾಖಲೆಗಳನ್ನು ಹಾಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ತಾಕೀತು ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷ, ಸದಸ್ಯ ಸಂಜೀವಕುಮಾರ ನೀರಲಗಿ, ಎಡಿಎಲ್‌ಆರ್ ನಾಗರಾಜ, ಎಂ.ಎಂ.ಮೈದೂರ, ಇತರರಿದ್ದರು.
ಮೊದಲೇ ಎಚ್ಚರಿಸಿದ್ದ ‘ವಿಜಯವಾಣಿ’
‘ಸೋರುತಿಹುದು ತಹಸೀಲ್ದಾರ್ ಕಚೇರಿ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಪತ್ರಿಕೆ ಈ ಹಿಂದೆ ವಿಶೇಷ ವರದಿ ಪ್ರಕಟಿಸಿತ್ತು. ನಂತರವೂ ಹಲವು ಬಾರಿ ತಹಸೀಲ್ದಾರ್ ಕಟ್ಟಡ ಸೋರಿಕೆ ಕುರಿತು ಗಮನ ಸೆಳೆದಿತ್ತು. ವರದಿ ಬೆನ್ನಲ್ಲೇ ಅಂದಿನ ಡಿಸಿ ರಘುನಂದನ ಮೂರ್ತಿ ಸ್ಥಳಕ್ಕೆ ಧಾವಿಸಿ, ಪೆಂಡಾಲ್ ಅಳವಡಿಸುವ ಮೂಲಕ ಸೋರಿಕೆಗೆ ತಾತ್ಕಾಲಿಕ ಪರಿಹಾರ ಸೂಚಿಸಿದ್ದರು. ನಂತರ ಮತ್ತದೇ ಸಮಸ್ಯೆ ಎದುರಾಗಿತ್ತು. ಇದೀಗ ಶಾಸಕರು ಅನುದಾನ ಮಂಜೂರು ಮಾಡಿದ್ದು, ಇನ್ನಾದರೂ ಶಾಶ್ವತ ಪರಿಹಾರ ದೊರೆಯುತ್ತದೋ ಎಂಬುದನ್ನು ಕಾದು ನೋಡಬೇಕಿದೆ.