

ಹಾವೇರಿ: ಮದುವೆ ಮನೆಯಲ್ಲಿ ಆಟವಾಡುತ್ತಿದ್ದಾಗ ಸುಡುವ ಸಾಂಬಾರು ಮೈಮೇಲೆ ಬಿದ್ದು 2 ವರ್ಷ 3 ತಿಂಗಳ ಹಸುಗೂಸು ಮೃತಪಟ್ಟ ಧಾರುಣ ಘಟನೆ ಶಿಗ್ಗಾಂವಿ ತಾಲೂಕು ಕುನ್ನೂರು ಗ್ರಾಮದಲ್ಲಿ ಸಂಭವಿಸಿದೆ.
ಹುಬ್ಬಳ್ಳಿ ತಾಲೂಕು ಚನ್ನಾಪುರ ಗ್ರಾಮದ ಮಕ್ತುಂಸಾಬ್ ಶೇತ್‌ಸನದಿ ಎಂಬುವರ 2.3 ವರ್ಷದ ಪುತ್ರಿ ರುಕ್ಸಾನಾ ಮೃತಪಟ್ಟ ಮಗು.
ಜೂ.14ರಂದು ಕುನ್ನೂರ ಗ್ರಾಮದ ಸಂಬಂಧಿಕರ ಮನೆಗೆ ಮದುವೆಗೆಂದು ಮಕ್ತುಂಸಾಬ್ ಕುಟುಂಬ ಸಮೇತರಾಗಿ ಬಂದಿದ್ದರು. ಈ ವೇಳೆ ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಸುಡುವ ಸಾಂಬಾರು ಮೈಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮೊನ್ನೆಯಷ್ಟೇ ಚಿಕಿತ್ಸೆ ಪಡೆದು ವಾಪಸಾಗಿದ್ದ ಮಗು ಆರೋಗ್ಯದಲ್ಲಿ ಮತ್ತೆ ವ್ಯತ್ಯಯ ಕಂಡು ಬಂದಿತ್ತು. ಹಾಗಾಗಿ, ಮತ್ತೆ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ.
ಘಟನೆಯಿಂದ ಪಾಲಕರ ಆಕ್ರಂದನ ಮುಗುಲು ಮುಟ್ಟಿತ್ತು. ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.