ಸ್ವಚ್ಛವಾಹಿನಿ ಚಾಲಕಿಯರಿಗೆ ಸೇವಾಭದ್ರತೆ ಒದಗಿಸಿ; ಆರೋಗ್ಯ ವಿಮೆ, ಕನಿಷ್ಠ ವೇತನ ಕೊಡಿ; ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರಕ್ಕೆ ಆಗ್ರಹ

16 HVR 2 B
Published on

ಹಾವೇರಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ವಾಹಿನಿಗಳ ಮೂಲಕ ಗ್ರಾಮದ ನೈರ್ಮಲ್ಯ ಕಾಪಾಡುತ್ತಿರುವ ಚಾಲಕರು ಹಾಗೂ ಸಹಾಯಕಿಯರಿಗೆ ನಿಗಧಿತ ಕೆಲಸ, ಕನಿಷ್ಠ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಗ್ರಾಮ ಪಂಚಾಯಿತಿ ಸ್ವಚ್ಛವಾಹಿನಿ ಆಟೋ ಡ್ರೈವರ್ಸ್ ಮತ್ತು ಸಹಾಯಕಿಯರ ಸಂಘ(ಸಿಐಟಿಯು ಸಂಯೋಜಿತ)ದ ರಾಜ್ಯ ಸಂಚಾಲಕ ಡಿ.ಎಂ.ಮಲಿಯಪ್ಪ ಆಗ್ರಹಿಸಿದರು.
ನಗರದ ಮುರುಘ ರಾಜೇಂದ್ರ ಮಠದಲ್ಲಿ ಸೋಮವಾರ ಸ್ವಚ್ಛವಾಹಿನಿ ಆಟೋ ಡ್ರೈವರ್ಸ್ ಹಾಗೂ ಸಹಾಯಕಿಯರ ಜಿಲ್ಲಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದ ಪ್ರಮುಖ ಅಭಿಯನವಾದ ‘ಸ್ವಚ್ಛ ಭಾರತ ಅಭಿಯಾನ’ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವುದಾಗಿ ಕೇಂದ್ರ ಸರ್ಕಾರವು ಉಲ್ಲೇಖ ಮಾಡುತ್ತಿದೆ. ಗ್ರಾಮಗಳ ಸ್ವಚ್ಛತೆಯ ಜವಾಬ್ದಾರಿ ವಹಿಸಿರುವ ಸ್ವಚ್ಛವಾಹಿನಿ ನೌಕರರಿಗೆ ಮೂಲ ಸೌಕರ್ಯ ಮರೀಚಿಕೆಯಾಗಿವೆ. ರಾಜ್ಯ ಸರ್ಕಾರದಿಂದ ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕೊಡುತ್ತಿಲ್ಲ. ಸ್ವಚ್ಛವಾಹಿನಿ ಗಾಡಿಗಳಿಗೆ ವಿಮೆ ನವೀಕರಣ ಮಾಡಿರುವುದಿಲ್ಲ ಎಂದರು.
ಜೀವದ ಹಂಗನ್ನು ತೊರೆದು ಸ್ವಚ್ಛತಾ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ವೇತನವನ್ನು ಬಾಕಿ ಉಳಿಸಿಕೊಂಡಿದೆ. ಸ್ವಚ್ಛತಾ ಮಹಿಳಾ ಸಿಬ್ಬಂದಿಗೆ ರಕ್ಷಣಾ ಸಲಕರಣೆಗಳನ್ನ ಒದಗಿಸುತ್ತಿಲ್ಲ. ಆರೋಗ್ಯ ವಿಮೆ ಮಾಡಿಸಿಲ್ಲ. ಮಹಿಳಾ ಕಾರ್ಮಿಕರು ಕಸ ವಿಲೇವಾರಿ ಮಾಡುವುದರಲ್ಲಿ ಪ್ರಮುಖರಾಗಿದ್ದು, ಕಸವನ್ನು ಬೇರ್ಪಡಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದರು.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಸ್ವಚ್ಛತಾ ಕೆಲಸವು ಖಾಯಂ ಕೆಲಸದ ಸ್ವರೂಪವಾಗಿದ್ದು ಸರ್ಕಾರ ಕನಿಷ್ಠ ವೇತನ 26,000 ರೂ. ನಿಗದಿಪಡಿಸಬೇಕು. ಸರ್ಕಾರದಿಂದ ತರಬೇತಿ ಪಡೆದ ಮಹಿಳಾ ಡ್ರೈವರ್‌ಗಳಿಗೆ ಇದುವರೆಗೂ ಆಟೋಗಳನ್ನ ಕೊಟ್ಟಿಲ್ಲ. ಕೆಟ್ಟು ನಿಂತಿರುವ ಆಟೋಗಳ ದುರಸ್ತಿ ಮಾಡಿಸುತ್ತಿಲ್ಲ. ಸ್ವಚ್ಛವಾಹಿನಿ ಮಹಿಳೆಯರ ಕುಂದುಕೊರತೆಗಳನ್ನು ಪರಿಹರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯ ನಂತರ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ರವಾನಿಸಲಾಯಿತು.
ಸಿಐಟಿಯು ಜಿಲ್ಲಾ ಸಂಚಾಲಕ ಅನ್ನದಾನಪ್ಪ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವೀಣಾ ಮಿಳ್ಳೆಮ್ಮನವರ, ನಾಗರತ್ನ ಜಿಂಗಿ, ಹೂವಕ್ಕ ಪವಾರ, ಮಮತಾ ಬಾರ್ಕಿ, ರಚನಾ ಹರಿಜನ, ಮೀನಾಕ್ಷಿ ಹೀಲದಹಳ್ಳಿ, ನಗೀನಾಬಾನು ನದಾಫ್, ಶಮೀನಾಬಾನು ತಡಸ, ದೀಪಾ ಕಂಬಳಿ, ಶೇಖವ್ವ ಹುಲಗೂರ, ದೀಪಾ ಓಲೇಕಾರ, ಸುಜಾತಾ ಪೂಜಾರ, ನಾಗಮ್ಮ ರಾಮಣ್ಣವರ, ಇತರರು ಇದ್ದರು.
ವೇತನ ತಾರತಮ್ಯ ಸರಿಪಡಿಸಿ
ಸರ್ಕಾರದ ಆದೇಶದಂತೆ ಪ್ರಸ್ತುತ 5,000 ರೂ.ನಿಂದ 7,500 ರೂ. ಪ್ರೋತ್ಸಾಹ ಧನ ಇದ್ದು, ಕೆಲ ಗ್ರಾಪಂಗಳಲ್ಲಿ ಸರಿಯಾಗಿ ಜಾರಿಗೊಳಿಸಿಲ್ಲ. ಮಾಸಿಕ ಗರೀಷ್ಠ ವೇತನ 7,500 ರೂ. ಸಮಾನ ವೇತನವನ್ನು ಎಲ್ಲ ಸಿಬ್ಬಂದಿಗೂ ನೀಡಲು ಕ್ರಮಕೈಗೊಳ್ಳಬೇಕು. ಆರೋಗ್ಯ ವಿಮೆ ಮಾಡಿಸಬೇಕು. ಸ್ವಚ್ಛವಾಹಿನಿ ನೌಕರರ ಕುಂದುಕೊರತೆ ಸಮಿತಿ ರಚಿಸಬೇಕು ಎಂಬುದು ಸ್ವಚ್ಛವಾಹಿನಿ ಚಾಲಕಿಯರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net