ಸ್ವಚ್ಛ ಪರಿಸರ ಆರೋಗ್ಯ ಜೀವನಕ್ಕೆ ರಹದಾರಿ; ನ್ಯಾಯಾಧೀಶೆ ಯಾದವ ವನಮಾಲಾ ಆನಂದರಾವ್

3 HVR 4
Published on

ಹಾವೇರಿ: ನಾವು ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರ, ಕಾರ್ಯನಿರ್ವಹಿಸುವ ಸ್ಥಳ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟಿಕೊಳ್ಳಬೇಕು. ಸ್ವಚ್ಛ ಪರಿಸರ ಆರೋಗ್ಯಕರ ಜೀವನಕ್ಕೆ ರಹದಾರಿ ಇದ್ದಂತೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಯಾದವ ವನಮಾಲಾ ಆನಂದರಾವ್ ಹೇಳಿದರು.
ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ಸೋಮವಾರ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಚ್ಛತೆ ಅತ್ಯಂತ ಮಹತ್ವದ ಕಾರ್ಯವಾಗಿದೆ. ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಕಾಯಿಲೆಗಳಿಂದ ಮುಕ್ತರಾಗಿ ಜೀವನ ನಡೆಸಬಹುದು ಎಂದರು.
ಸ್ಚಚ್ಛತಾ ಕಾರ್ಯದಲ್ಲಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಮೆಹಬೂಬಖಾನ್ ಘಾಜಿಖಾನ್ ಶಿವಳ್ಳಿ, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನಿಂಗೌಡ ಪಾಟೀಲ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಪ್ರಕಾಶ ವಿ., ಹಿರಿಯ ದಿವಾಣಿ ನ್ಯಾಯಾಧೀಶ ಬಾಲಮುಕುಂದ ರಮೇಶರಾವ್ ಮುತಾಲಿಕದೇಸಾಯಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಿಪಿನ್ ಎಚ್.ಎಂ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಬಣಕಾರ, ಪ್ರಭಾರ ಮುಖ್ಯ ಆಡಳಿತಾಧಿಕಾರಿ ಸುದರ್ಶನ ಕುಲಕರ್ಣಿ, ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net