

ಹಾವೇರಿ: ವಿದ್ಯುತ್ ಅವಘಡದಿಂದ ಉಂಟಾದ ಕಬ್ಬು ಬೆಳೆ ಹಾನಿ ಪರಿಹಾರ ಮೊತ್ತವನ್ನು 30 ದಿನದೊಳಗಾಗಿ ರೈತರಿಗೆ ಪಾವತಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
ಹಿರೇಕೆರೂರ ತಾಲೂಕು ಮುದ್ದಿನಕೊಪ್ಪ ಗ್ರಾಮದ ಲೋಕಪ್ಪ ಮಹದೇವಪ್ಪ ಹೊಂಬರಡಿ ಎಂಬುವರು ತಮ್ಮ 4.12 ಎಕರೆ ಜಮೀನಿನಲ್ಲಿ ಕಬ್ಬಿನ ಬೆಳೆ ಬೆಳೆದಿದ್ದರು. ಇವರ ಜಮೀನಿನಲ್ಲಿ ಹಾಯ್ದುಹೋದ ವಿದ್ಯುತ್ ಕಂಬಗಳ ತಂತಿಗಳು ಬಹಳ ಸಡಿಲವಾಗಿ ಜೋತಾಡುತ್ತಿದ್ದು, ತಂತಿಗಳನ್ನು ಬಿಗಿಪಡಿಸುವಂತೆ ಹಿರೇಕೆರೂರ ಹೆಸ್ಕಾಂ ಕಚೇರಿಗೆ ಮನವಿ ಮಾಡಿಕೊಂಡಿದ್ದರು. ಹೆಸ್ಕಾಂ ಅಧಿಕಾರಿಗಳು ತಂತಿಗಳನ್ನು ಸರಿಪಡಿಸಿರಲಿಲ್ಲ.
ಡಿಸೆಂಬರ್ 19, 2022ರಂದು ಮಧ್ಯಾಹ್ನ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ಬೆಂಕಿ ಕಿಡಿ ಹೊತ್ತಿಕೊಂಡು 4.12 ಎಕರೆಯಲ್ಲಿ ಫಲವತ್ತಾಗಿ ಬೆಳೆದ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟುಹೋಗಿತ್ತು. ಈ ಘಟನೆಯ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೆಸ್ಕಾಂ ಅಧಿಕಾರಿಗಳು ಕಬ್ಬು ಬೆಳೆಹಾನಿಗೆ ಯಾವುದೇ ಪರಿಹಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್.ಈಶ್ವರಪ್ಪ ಹಾಗೂ ಮಹಿಳಾ ಸದಸ್ಯರಾದ ಉಮಾದೇವಿ ಹಿರೇಮಠ ನೇತೃತ್ವದ ತಂಡ, ಕಬ್ಬಿನ ಬೆಳೆಹಾನಿ ಪರಿಹಾರ ಮೊತ್ತ 2,75,323 ರೂ. ಹಾಗೂ ಮಾನಸಿಕ, ದೈಹಿಕ ವ್ಯಥೆಗಾಗಿ ಎರಡು ಸಾವಿರ ರೂ.ಯನ್ನು 30 ದಿನದೊಳಗಾಗಿ ಪಾವತಿಸುವಂತೆ ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.6ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.