ಟ್ರಾೃಕ್ಟರ್‌ನಿಂದ ಕಬ್ಬು ಬೆಳೆ ನಾಶಪಡಿಸಿದ ರೈತ; ನೀರಿಲ್ಲದೆ ಒಣಗುತ್ತಿದೆ ಫಸಲು

15 HVR 2 A
Published on

ಹಾವೇರಿ: ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಕೊಳವೆ ಬಾವಿಯಲ್ಲಿದ್ದ ನೀರೂ ಬತ್ತಿ ಹೋಗಿದೆ. ಇದರಿಂದ ಕಂಗೆಟ್ಟ ಬ್ಯಾಡಗಿ ತಾಲೂಕು ಚಿಕ್ಕಣಜಿ ಗ್ರಾಮದ ರೈತ ಮಲ್ಲೇಶಪ್ಪ ಡಂಬಳ ತಮ್ಮ ಹೊಲದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಯನ್ನು ಗುರುವಾರ ಟ್ರಾೃಕ್ಟರ್ ರೂಟರ್‌ನಿಂದ ನಾಶಪಡಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಗ್ರಾಮದ 10 ಎಕರೆ ಜಮೀನಿನಲ್ಲಿ ಮಲ್ಲೇಶಪ್ಪ ಕಬ್ಬು ಹಾಕಿದ್ದರು. ಮೊದಲ ವರ್ಷ ಎಕರೆಗೆ 72 ಟನ್ ವರೆಗೆ ಫಸಲು ಪಡೆದರು. ಕಳೆದ ವರ್ಷ ಅತಿವೃಷ್ಠಿಯಿಂದಾಗಿ ಫಸಲು ಕಡಿಮೆಯಾಗಿದ್ದು, ಎಕರೆಗೆ ಕೇವಲ 20ರಿಂದ 25 ಟನ್ ವರೆಗೆ ಮಾತ್ರ ಕಬ್ಬು ಬಂದಿತ್ತು. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಇದ್ದ ನಾಲ್ಕು ಕೊಳವೆ ಬಾವಿಗಳಲ್ಲಿ ಎರಡು ಬತ್ತಿ ಹೋಗಿವೆ. ಉಳಿದ ಎರಡು ಬೋರ್‌ವೆಲ್‌ನಲ್ಲಿ ಕಡಿಮೆ ನೀರು ಉಳಿದಿದೆ.
ಕಬ್ಬು ಬೆಳೆ ಒಣಗುತ್ತಿರುವ ಕಾರಣ ಸದ್ಯ ಮೂರು ಎಕರೆ ಬೆಳೆಯನ್ನು ನಾಶಪಡಿಸಿದ್ದೇನೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಎಲ್ಲವನ್ನೂ ನಾಶಪಡಿಸಬೇಕಾಗುತ್ತದೆ. ನಮ್ಮ ಸುತ್ತಮುತ್ತಲಿನ ಹಲವು ಕಬ್ಬು ಬೆಳೆಗಾರರದ್ದೂ ಇದೇ ಪರಿಸ್ಥಿತಿಯಾಗಿದೆ. ಕಳೆದ ವರ್ಷ ಅತಿವೃಷ್ಠಿ, ಈ ವರ್ಷ ಅನಾವೃಷ್ಠಿಯಾಗಿದ್ದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಕಬ್ಬು ಬೆಳೆಗಾರರ ಸಂಕಷ್ಟಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ನೊಂದ ರೈತ ಮಲ್ಲೇಶಪ್ಪ ಡಂಬಳ ‘ವಿಜಯವಾಣಿ’ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೋಟ್:

ನೀರು ಸಿಗದೇ ಕಬ್ಬು ಬೆಳೆ ಒಣಗಿದ್ದರಿಂದ ನಾಶಪಡಿಸಿದ್ದೇನೆ. ಕಬ್ಬು ಬೆಳೆಗಾರರ ಪರಿಸ್ಥಿತಿ ಗಂಭೀರವಾಗಿದೆ. ಬೇರೆ ಬೆಳೆಗಳಿಗೆ ನೀಡಿದಂತೆ ಕಬ್ಬು ಬೆಳೆಗೂ ಸರ್ಕಾರ ವಿಮೆ ಕಲ್ಪಿಸಬೇಕು. ಈಗ ಕಬ್ಬು ನಾಶವಾಗಿರುವ ರೈತರಿಗೆ ಪರಿಹಾರ ಒದಗಿಸಬೇಕು.
ಮಲ್ಲೇಶಪ್ಪ ಡಂಬಳ, ಕಬ್ಬು ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net