

ಹಾವೇರಿ: ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ತಾಲೂಕಿನ ಕುಳೇನೂರ ಗ್ರಾಮದ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದ್ದ ಎರಡು ಚಿರತೆ ಮರಿಗಳಲ್ಲಿ ಒಂದನ್ನು ತಾಯಿ ಚಿರತೆ ಬೇರೆಡೆ ಹೊತ್ತುಕೊಂಡು ಹೋಗಿದೆ. ಮತ್ತೊಂದು ಮರಿಯನ್ನು ರಕ್ಷಣೆ ಮಾಡಿರುವ ಅರಣ್ಯ ಇಲಾಖೆಯವರು ಗದಗ ಜಿಲ್ಲೆಯ ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಿದ್ದಾರೆ.
ಭಾನುವಾರ ಕಬ್ಬು ಕಟಾವು ಮಾಡುವ ವೇಳೆ ಹೊಲದಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿದ್ದವು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮರಿಗಳನ್ನು ಹೊಲದಲ್ಲೇ ಬಿಟ್ಟಿದ್ದರು. ತಡರಾತ್ರಿ ಸ್ಥಳಕ್ಕೆ ಆಗಮಿಸಿದ್ದ ತಾಯಿ ಚಿರತೆ ಒಂದೇ ಮರಿಯನ್ನು ಹೊತ್ತುಕೊಂಡು ಹೋಗಿದ್ದು, ಮತ್ತೊಂದು ಮರಿಯನ್ನು ಬಿಟ್ಟು ಹೋಗಿದೆ.
ಸೋಮವಾರ ಬೆಳಗ್ಗೆ ಸಿಬ್ಬಂದಿ ಗಮನಿಸಿದಾಗ ಒಂದೇ ಮರಿ ಇರುವುದು ಗೊತ್ತಾಗಿದೆ. ಹೀಗಾಗಿ, ಪಶುವೈದ್ಯರ ಬಳಿ ಮರಿಯ ಆರೋಗ್ಯ ತಪಾಸಣೆ ನಡೆಸಿ, ಬಾಟಲಿಯಲ್ಲಿ ಹಾಲು ಕುಡಿಸಿ, ಆರೈಕೆಗಾಗಿ ಬಿಂಕದಕಟ್ಟೆ ಝೂಗೆ ರವಾನಿಸಿದ್ದಾರೆ.
ಕಬ್ಬು ಕಟಾವು ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜನರ ಗದ್ದಲ ಹೆಚ್ಚಾಗಿದೆ. ಇದರಿಂದ ತಾಯಿ ಚಿರತೆ ಗೊಂದಲಕ್ಕೀಡಾಗಿ ಒಂದೇ ಮರಿ ತೆಗೆದುಕೊಂಡು ಹೋಗಿರಬಹುದು. ಹೆಚ್ಚು ದಿನ ಮರಿಯೊಂದನ್ನೇ ಬಿಟ್ಟರೆ ನಿತ್ರಾಣಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಪಶುವೈದ್ಯರ ಬಳಿ ಆರೋಗ್ಯ ತಪಾಸಣೆ ನಡೆಸಿದ್ದು, ಮರಿ ಆರೋಗ್ಯವಾಗಿದೆ. ಅರಣ್ಯ ಇಲಾಖೆ ಅನುಮತಿ ಮೇರೆಗೆ ಚಿರತೆ ಮರಿಯನ್ನು ಬಿಂಕದಕಟ್ಟೆ ಝೂಗೆ ಕಳುಹಿಸಲಾಗಿದೆ ಎಂದು ಡಿಸಿಎಫ್ ಅಬ್ದುಲ್ ಅಜೀಜ್ ತಿಳಿಸಿದ್ದಾರೆ.