

ಹಾವೇರಿ: ನೋಂದಣಿಗೆ ಅರ್ಜಿ ಸಲ್ಲಿಸಿದವರಿಗೆ ನೋಂದಣಿ ಮಾಡಿಸಲು ಮೊದಲಿನಂತೆ 24 ಗಂಟೆಯ ಕಾಲಾವಕಾಶ ಕೊಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಶುಕ್ರವಾರ ಏಕಾಏಕಿ ಹಾವೇರಿಯ ತಾಲೂಕು ಆಡಳಿತ ಸೌಧದಲ್ಲಿರುವ ಉಪನೋಂದಣಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.
ಗ್ರಾಮೀಣ ಭಾಗದಿಂದ ಬಸ್ ಹಿಡಿದು ಕಚೇರಿಗೆ ಬರುವಾಗ ಒಂದು ಗಂಟೆ ಹೆಚ್ಚು ಕಡಿಮೆ ಆಗುತ್ತದೆ. ಹಾಗಾಗಿ, ಹಳೆಯ ಪದ್ಧತಿ ಸರಿಯಾಗಿತ್ತು. ಇದೀಗ ದಿಢೀರನೇ 5, 15 ನಿಮಿಷದೊಳಗೇ ನೋಂದಣಿ ಮಾಡಿಸಲೇಬೇಕು ಎಂಬ ನಿಯಮ ಸರಿಯಲ್ಲ. ಈ ಕೂಡಲೇ ಇದನ್ನು ಬದಲಾಯಿಸಿ, ಹಳೆಯ ನಿಯಮ ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಳಿಕ ಸ್ಥಳಕ್ಕೆ ಜಿಲ್ಲಾ ನೋಂದಣಿ ಕಚೇರಿ ಅಧಿಕಾರಿಗಳು ಆಗಮಿಸಿ, ಬಾಗಿಲು ತೆರೆಸಿ ನೋಂದಣಿ ಸರತಿಯಲ್ಲಿದ್ದವರ ನೋಂದಣಿ ಮಾಡಿಸಿಕೊಟ್ಟರು. ಈ ಸಮಸ್ಯೆ ಪರಿಹರಿಸುವ ಕುರಿತು ಇಲಾಖೆಗೆ ತಿಳಿಸುವುದಗಿ ಭರವಸೆ ನೀಡಿದರು.
ಕೋಟ್:
ಗುರುವಾರ ಸಂಜೆ ಜಮೀನು ನೋಂದಣಿ ಮಾಡಿಸಬೇಕಿತ್ತು. ಆಗ ಬಂದರೆ ನಾಳೆ ಬನ್ನಿ ಎಂದರು. ಬ್ಯಾಡಗಿಯಿಂದ ಹಾವೇರಿ ಕಚೇರಿಗೆ ಬರುವಷ್ಟರಲ್ಲಿ ಐದು ನಿಮಿಷ ತಡವಾಯಿತು. ಅದಕ್ಕಾಗಿ ಮತ್ತೆ ನಾಳೆ ಬನ್ನಿ ಎಂದರು. ಸರ್ಕಾರ ಈ ನಿಯಮ ತಿದ್ದುಪಡಿ ಮಾಡಿ ಮೊದಲಿನಂತೆ 24 ತಾಸುಗಳ ಕಾಲಾವಕಾಶ ಕೊಡಬೇಕು.
- ಶಿವಾನಂದ ಕಾಸಂಬಿ, ಬ್ಯಾಡಗಿ ನಿವಾಸಿ