ವಿದ್ಯಾರ್ಥಿ ಮೇಲೆ ಹಲ್ಲೆ, ಪ್ರಕರಣ ದಾಖಲು

ABVP Halle
Published on

ಹಾವೇರಿ: ಸಾರಿಗೆ ಸಂಸ್ಥೆ ಬಸ್‌ನಲ್ಲಿ ಮಹಿಳಾ ಕಂಡಕ್ಟರ್‌ವೊಬ್ಬರು ವಿದ್ಯಾರ್ಥಿಯ ಶರ್ಟ್ ಹಿಡಿದು ಎಳೆದಾಡಿ, ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಜಾರಿಲಕಮಾಪುರದ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿ ಮನೋಜ ಚಳ್ಯಾಳ ಹಲ್ಲೆಗೀಡಾದ ವಿದ್ಯಾರ್ಥಿ. ಸಾರಿಗೆ ಸಂಸ್ಥೆ ಸಿಬ್ಬಂದಿ ಅನಸೂಯಾ, ಬಸ್ ಚಾಲಕ ಹಾಗೂ ತರರ ವಿರುದ್ಧ ದೂರು ದಾಖಲಾಗಿದೆ.
ಜು.10ರಂದು ಬೆಳಗ್ಗೆ ಮನೋಜ ಇಜಾರಿಲಕಮಾಪುರದಲ್ಲಿ ಬಸ್ ಹತ್ತಿದ್ದರು. ಒಳಗೆ ಬಾ ಎಂದು ಕಂಡಕ್ಟರ್ ಅನಸೂಯ ಹೇಳಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಕ್ರೋಶಗೊಂಡ ಅನಸೂಯ ಮನೋಜನ ಶರ್ಟ್ ಹಿಡಿದು, ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ನೆಲಕ್ಕೆ ಕೆಡವಿ ಸೊಂಟಕ್ಕೆ ಒದ್ದಿದ್ದಾರೆ. ಬಸ್ ಹಾಯಿಸಿ ಕೊಲ್ಲುತ್ತೇವೆಂದು ಬೆದರಿಕೆ ಹಾಕಿದ್ದಾರೆ ಎಂದು ಮನೋಜ ದೂರಿನಲ್ಲಿ ಆರೋಪಿಸಿದ್ದಾರೆ.
ಕೊಠಡಿಯಲ್ಲಿ ಹಾಕಿ ಹಲ್ಲೆ
ವಿದ್ಯಾರ್ಥಿ ಮನೋಜನನ್ನು ಬಸ್ ನಿಲ್ದಾಣಕ್ಕೆ ಕರೆದೊಯ್ದ ಚಾಲಕ, ನಿರ್ವಾಹಕಿ ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ನಂತರ ಬಸ್‌ನಲ್ಲಿ ಹತ್ತಿಸಿಕೊಂಡು ಠಾಣೆಗೆ ಕರೆದೊಯ್ಯಲು ಮುಂದಾಗಿದ್ದರು. ಆಗ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬಸ್‌ಗೆ ಅಡ್ಡ ನಿಂತು ಪ್ರತಿಭಟನೆ ನಡೆಸಿದ್ದರು. ನಿರ್ವಾಹಕಿ ವಿದ್ಯಾರ್ಥಿಗಳೊಂದಿಗೆ ಹಲವು ಬಾರಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಬಿವಿಪಿ ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡ್ರ ಆರೋಪಿಸಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ: ‘ಬಾಗಿಲು ಬಳಿ ನಿಲ್ಲಬೇಡಿ. ಬಸ್ಸಿನ ಒಳಗೆ ಬಾ ಎಂದಿದ್ದಕ್ಕೆ ವಿದ್ಯಾರ್ಥಿಯೇ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸಮವಸ್ತ್ರದ ಕೊರಳಪಟ್ಟಿ ಹಿಡಿದು ಜಗ್ಗಾಡಿ ಜೇಬು ಹರಿದಿದ್ದಾನೆ. ಕೈ ಹಿಡಿದು ತಿರುವಿ ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದ್ದಾನೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾನೆ’ ಎಂದು ನಿರ್ವಾಹಕಿ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net