

ಹಾವೇರಿ: ಕೃಷಿ ಇಲಾಖೆಯಿಂದ ಜಿಲ್ಲೆಯ ರೈತರಿಂದ 2024-25ನೇ ಸಾಲಿನ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟಗಳ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿಯಲ್ಲಿ ವಿವಿಧ ಹಂತಗಳಲ್ಲಿ ಆಯ್ಕೆ ಮಾಡಲಾದ ಬೆಳೆಗಳಲ್ಲಿ ಬೆಳೆ ಸ್ಪರ್ಧೆ ನಡೆಸಿ ಪ್ರತಿ ಬೆಳೆಗೂ ಮೂರು ಬಹುಮಾನಗಳನ್ನು ನೀಡಲಾಗುತ್ತದೆ.
ರೈತರು ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದುಕೊಳ್ಳಬೇಕು. ಅರ್ಜಿಯೊಂದಿಗೆ ಕಂದಾಯ ಇಲಾಖೆಯ ದಾಖಲೆ ಪ್ರಕಾರ ಜಮೀನು (ಖಾತೆ) ಹೊಂದಿರುವ ಹಾಗೂ ಸ್ವತಃ ಬೇಸಾಯದಲ್ಲಿ ತೊಡಗಿರುವ ಸ್ವಯಂ ಕ್ರಿಯಾಶೀಲ ಕೃಷಿಕರಾಗಿದ್ದು, ಪಹಣಿ ಪತ್ರಿಕೆ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಅಥವಾ ಸಾಮಾನ್ಯ ವ್ಯವಹಾರಿಕ ಅಧಿಕಾರ(ಜಿ.ಪಿ.ಎ) ಹೊಂದಿದ ಪಕ್ಷದಲ್ಲಿ (ಭೂ ಸುಧಾರಣಾ ಕಾಯ್ದೆಗೆ ಒಳಪಟ್ಟು) ಕಡ್ಡಾಯವಾಗಿ ಲಗತ್ತಿಸಬೇಕು.
ರಾಜ್ಯ ಮಟ್ಟದ ಬೆಳೆ ಸ್ಪರ್ಧೆಗೆ ಭತ್ತ (ಮುಂಗಾರು ಮಳೆಯಾಶ್ರಿತ ಹಾಗೂ ನೀರಾವರಿ), ರಾಗಿ ಮುಂಗಾರು (ಮಳೆಯಾಶ್ರಿತ), ಜೋಳಹಿಂಗಾರು (ಮಳೆಯಾಶ್ರಿತ), ಶೇಂಗಾ ಮುಂಗಾರು (ಮಳೆಯಾಶ್ರಿತ), ತೊಗರಿ ಮುಂಗಾರು (ಮಳೆಯಾಶ್ರಿತ), ಕಡಲೆ ಹಿಂಗಾರು (ಮಳೆಯಾಶ್ರಿತ), ಸೋಯಾ ಅವರೆ ಮುಂಗಾರು (ಮಳೆಯಾಶ್ರಿತ), ಮುಸುಕಿನ ಜೋಳ ಮುಂಗಾರು (ಮಳೆಯಾಶ್ರಿತ), ನವಣೆ ಮುಂಗಾರು (ಮಳೆಯಾಶ್ರಿತ), ಸಜ್ಜೆ ಮುಂಗಾರು (ಮಳೆಯಾಶ್ರಿತ) 11 ಬೆಳೆಗಳನ್ನು ನಿಗದಿಪಡಿಸಲಾಗಿದೆ.
ಜಿಲ್ಲಾಮಟ್ಟದ ಬೆಳೆ ಸ್ಪರ್ಧೆಗೆ ಮುಸುಕಿನ ಜೋಳ (ಮಳೆಯಾಶ್ರಿತ)ವನ್ನು ನಿಗದಿಪಡಿಸಲಾಗಿದೆ. ತಾಲೂಕಾ ಮಟ್ಟದ ಸ್ಪರ್ಧೆಗೆ ಹಾವೇರಿ ತಾಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ), ಹಾನಗಲ್ಲ ತಾಲೂಕಿಗೆ ಭತ್ತ (ನೀರಾವರಿ), ಸವಣೂರ ತಾಲೂಕಿಗೆ ಶೇಂಗಾ (ಮಳೆಯಾಶ್ರಿತ), ಶಿಗ್ಗಾಂವಿ ತಾಲೂಕಿಗೆ ಶೇಂಗಾ (ಮಳೆಯಾಶ್ರಿತ), ಬ್ಯಾಡಗಿ ತಾಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ), ಹಿರೇಕೆರೂರ ತಾಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ), ರಾಣೆಬೆನ್ನೂರ ಮುಸುಕಿನ ಜೋಳ (ಮಳೆಯಾಶ್ರಿತ) ನಿಗದಿಪಡಿಸಲಾಗಿದೆ.
ಮುಂಗಾರು ಹಂಗಾಮಿಗೆ ಅರ್ಜಿಗಳನ್ನು ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಆ.31 ಕೊನೆಯ ದಿನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
50 ಸಾವಿರ ರೂ. ಬಹುಮಾನ
ರಾಜ್ಯ ಮಟ್ಟದ ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ 40 ಸಾವಿರ ರೂ. ಹಾಗೂ ತೃತೀಯ ಬಹುಮಾನ 35 ಸಾವಿರ ರೂ. ವಿತರಿಸಲಾಗುವುದು. ಜಿಲ್ಲಾ ಮಟ್ಟದ ಪ್ರಥಮ ಬಹುಮಾನ 30 ಸಾವಿರ ರೂ., ದ್ವಿತೀಯ 25 ಸಾವಿರ ರೂ. ಹಾಗೂ ತೃತೀಯ ಬಹುಮಾನ 20 ಸಾವಿರ ರೂ. ಹಾಗೂ ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನ 15 ಸಾವಿರ ರೂ., ದ್ವಿತೀಯ 10 ಸಾವಿರ ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ವಿತರಿಸಲಾಗುತ್ತದೆ.