ಹಾವೇರಿ ಶ್ರೀಕಂಠಪ್ಪ ಬಡಾವಣೆ ಕಾಮಗಾರಿ ಆರಂಭ; ವಿಜಯವಾಣಿ ವರದಿ ಪರಿಣಾಮ; ನಗರೋತ್ಥಾನ 15ನೇ ಹಣಕಾಸು ಯೋಜನೆಯಡಿ ಚರಂಡಿ, ರಸ್ತೆ ಕಾಮಗಾರಿ ಚುರುಕು

24 HVR 2 A
Published on

ಹಾವೇರಿ: ನಗರದ ಹೊರವಲಯ ಹಾನಗಲ್ಲ ರಸ್ತೆಯ ಶ್ರೀಕಂಠಪ್ಪ ಬಡಾವಣೆ ನಿರ್ಮಾಣವಾಗಿ 22 ವರ್ಷ ಕಳೆದರೂ ಇಲ್ಲಿನ ನಿವಾಸಿಗಳು ಮೂಲ ಸೌಕರ್ಯವಿಲ್ಲದೇ ಸಂಕಷ್ಟಕ್ಕೀಡಾಗಿದ್ದರು. ಮಾ.22ರಂದು ‘ಸಮಸ್ಯೆಗಳ ಆಗರ ಶ್ರೀಕಂಠಪ್ಪ ಬಡಾವಣೆ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಹಾವೇರಿ ನಗರಸಭೆ ಬಡಾವಣೆಯಲ್ಲಿ ಇದೀಗ ಕಾಮಗಾರಿ ಆರಂಭಿಸಿದೆ. ನಗರಸಭೆ ವಾರ್ಡ್ ಸಂಖ್ಯೆ 31ರ ವ್ಯಾಪ್ತಿಯಲ್ಲಿರುವ ಈ ಬಡಾವಣೆಯಲ್ಲಿ ಪೊಲೀಸರು, ಶಿಕ್ಷಕರು, ಇತರರು ವಾಸಿಸುತ್ತಿದ್ದಾರೆ. ಮುಖ್ಯವಾಗಿ ಇಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ದೇವರಾಜ ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿನಿಯರು ವಾಸವಾಗಿದ್ದಾರೆ. ಈ ಹಾಸ್ಟೆಲ್‌ಗಳಿಂದ ಹೆಚ್ಚಿನ ಪ್ರಮಾಣದ ಕೊಳಚೆ ನೀರು ಹರಿದು ಬರುತ್ತಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಗಬ್ಬು ನಾರುತ್ತಿತ್ತು. ಬಡಾವಣೆ ತುಂಬ ರಸ್ತೆ, ಚರಂಡಿ ವ್ಯವಸ್ಥೆ ಜನ ಕಂಗಾಲಾಗಿದ್ದರು ಎಂದು ವರದಿ ಮೂಲಕ ಸಮಸ್ಯೆ ತೆರೆದಿಡಲಾಗಿತ್ತು. ಇದೀಗ ನಗರಸಭೆ ನಗರೋತ್ಥಾನ 15ನೇ ಹಣಕಾಸು ಯೋಜನೆಯಡಿ ಚರಂಡಿ, ರಸ್ತೆ ಕಾಮಗಾರಿ ಆರಂಭಿಸಿದೆ. ಬಡಾವಣೆಯ ಮುಖ್ಯರಸ್ತೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣಕ್ಕೆ 35 ಲಕ್ಷ ರೂ. ಹಾಗೂ ಬಸವರಾಜ ಬೆಟಗೇರಿ ಮನೆಯಿಂದ ಕರ್ನಾಟಕ ಪಬ್ಲಿಕ್ ಶಾಲೆವರೆಗೆ ತೆರೆದ ಚರಂಡಿ ನಿರ್ಮಾಣಕ್ಕೆ 16 ಲಕ್ಷ ರೂ. ಬಿಡುಗಡೆಯಾಗಿದೆ. ಕಾಮಗಾರಿ ಆರಂಭಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಗುಣಮಟ್ಟದ ಕಾಮಗಾರಿ ಆಗಬೇಕು. ಈ ಬಗ್ಗೆ ನಗರಸಭೆ ಅಧಿಕಾರಿಗಳು ನಿಗಾ ವಹಿಸಿಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net