ಹಾವೇರಿಯಲ್ಲಿ ಶಿರಡಿ ಸಾಯಿಬಾಬಾರ ದರ್ಶನ ಭಾಗ್ಯ: ಅಶ್ವಿನಿನಗರ ಶ್ರೀ ಸಾಯಿಮಂದಿರದಲ್ಲಿ ಹುಕ್ಕೇರಿ ಮಠದ ಶ್ರೀಗಳ ಹೇಳಿಕೆ

10 SaiBaba 1
Published on

ಹಾವೇರಿ: ಹಾವೇರಿಯ ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾರ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಾರ ಶ್ರೀ ಸಾಯಿಬಾಬಾರಿಗೆ ಹುಕ್ಕೇರಿ ಮಠದ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು.

ಇಲ್ಲಿನ ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುವಾರ ಗುರು ಪೂರ್ಣಿಮೆ ಮಹೋತ್ಸವ ಹಾಗೂ ದೇವಸ್ಥಾನದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ವಿಜೃಂಭಣೆಯಿಂದ ಜರುಗಿತು.

ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಗ್ಗೆ ಸಾಯಿಬಾಬಾರಿಗೆ ಕಾಕಡಾರತಿ, ಕ್ಷೀರಾಭಿಷೇಕ, ಮಹಾ ಮಂಗಳಾರತಿ, ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ನವಗ್ರಹ ಪೂಜೆ, ಗಣ ಹೋಮ, ದತ್ತಾತ್ರೇಯ ಹೋಮ, ರುದ್ರ ಹೋಮ ಜರುಗಿತು.

ನಂತರ ಟ್ರಸ್ಟ್ ಪದಾಧಿಕಾರಿಗಳು, ಭಕ್ತರಿಂದ ಶ್ರೀಗಳ ಪಾದಪೂಜೆ ನೆರವೇರಿತು. ಶ್ರೀಗಳು ಮಾತನಾಡಿ, ಹಾವೇರಿಯಲ್ಲಿ ಶ್ರೀ ಶಿರಡಿ ಸಾಯಿಬಾಬಾರ ತದ್ರೂಪಿ ಬಾಬಾರ ದರ್ಶನ ಭಾಗ್ಯ ಪಡೆದು ಭಕ್ತರು ಪುನೀತರಾಗುತ್ತಿದ್ದಾರೆ. ದೇಗುಲದ ಸೇವಾ ಕಾರ್ಯಗಳು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು. ಮಧ್ಯಾಹ್ನ ಭಕ್ತರಿಗೆ ಅನ್ನಸಂರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಭಕ್ತರು ಧೂಪಾರತಿ ಹಾಗೂ ಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಂಡರು.

ದೇವಸ್ಥಾನ ಸೇವಾಸಮಿತಿ ಅಧ್ಯಕ್ಷ ಜಗದೀಶ ಬೆಟಗೇರಿ, ಕಾರ್ಯದರ್ಶಿ ವಿಜಯಕುಮಾರ ಗೊಡಚಿ, ಪದಾಧಿಕಾರಿಗಳಾದ ರಾಜಶೇಖರ ಕಲ್ಲಮ್ಮನವರ, ಕೆ.ಸಿ.ಪಾವಲಿ, ಅಶೋಕ ಹೊಸಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net