

ಹಾವೇರಿ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಮುಸ್ಲಿಂ ಕಿಡಿಗೇಡಿಗಳಿಂದ ಸಂಭವಿಸಿದ ಗಲಭೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ. ಇನ್ನುಮುಂದೆ ಹಿಂದುಗಳ ಮೇಲಿನ ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತ ರೀತಿಯಲ್ಲಿ ಹೊರಟಿದ್ದ ಗಣೇಶ ವಿಸರ್ಜನೆ ಮೆರವಣಿಗೆ ಮಸೀದಿ ಬಳಿ ಬರುತ್ತಿದ್ದಂತೆ ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದು ಗಲಭೆ ಮಾಡಿದ್ದಾರೆ. ಮಸೀದಿ ಮುಂದೆ ಹೊಗಬಾರದಾ. ವಾದ್ಯಗಳನ್ನು ಭಾರಿಸಬಾರದಾ ? ಅದು ಸಾರ್ವಜನಿಕ ರಸ್ತೆ. ಯಾರಪ್ಪನ ಸ್ವತ್ತಲ್ಲ. ಯಾವ ಸೊಕ್ಕಿನ ವರ್ತನೆ ಇದು. ಇದಕ್ಕೆಲ್ಲ ಕಾರಣ ಕಾಂಗ್ರೆಸ್. ಇವರನ್ನು ತಲೆಯ ಮೇಲೆ ಹೊತ್ತು ಕುಣಿದಿದ್ದೇ ಅವರು ಎಂದು ದೂಷಿಸಿದರು.
ಮುಸ್ಲಿಂ ಸಮಾಜಕ್ಕೆ ಎಚ್ಚರಿಕೆ ಕೊಡುತ್ತೇನೆ. ಇನ್ನುಮುಂದೆ ಹೀಗೆ ಆದರೆ ಸಹಿಸಲ್ಲ. ಮುಸ್ಲಿಂ ಮುಲ್ಲಾ, ಮೌಲ್ವಿಗಳು ನೆಲಮಂಗಲ ಘಟನೆಯ ಗಲಭೆಕೋರರನ್ನು ನಿಷೇಧಿಸಿ ಫತ್ವಾ ಹೊರಡಿಸಲಿ. ಆಗ ನಿಮ್ಮನ್ನು ನಂಬುತ್ತೇವೆ ಎಂದರು.
ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚಲು ನನ್ನದೂ ವಿರೋಧವಿದೆ. ಈಗ ಡಬಲ್ ಡಿಜೆ ಹಚ್ಚಿ ಎನ್ನುವೆ. ಸರ್ಕಾರ ಮೊದಲು ದಿನಕ್ಕೆ ಐದು ಬಾರಿ ಮಸೀದಿ ಮೇಲೆ ಆಜಾನ್ ಕೂಗುವುದರ ವಿರುದ್ಧ ಕ್ರಮ ಕೈಗೊಳ್ಳಲಿ, ಆಗ ನಾನೇ ಡಿಜೆ ನಿಲ್ಲಿಸುತ್ತೇನೆ ಎಂದರು.
ಚಲುವರಾಯಸ್ವಾಮಿ ರಾಜೀನಾಮೆ ಕೊಡಲಿ:
ಇದು ಪೂರ್ವನಿಯೋಜಿತ ಕೃತ್ಯ. ಕಳೆದ ವರ್ಷವೂ ಇದೇ ಸ್ಥಳದಲ್ಲಿ ಗಲಾಟೆ ನಡೆದಿತ್ತು. ಈ ಸಲ ಯಾಕೆ ಮುನ್ನೆಚ್ಚರಿಕೆ ವಹಿಸಲಿಲ್ಲ. ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ರಾಜೀನಾಮೆ ಕೊಡಬೇಕು. ಸ್ಥಳೀಯ ಶಾಸಕ, ಎಸ್ಪಿ ಬೇಜವಾಬ್ದಾರಿ ವಹಿಸಿದ್ದಾರೆ. ಗುಪ್ತಚರ ಇಲಾಖೆ ವಿಫಲವಾಗಿದೆ. ಮುನ್ನೆಚ್ಚರಿಕೆ ವಹಿಸಿದ್ದರೆ ಗಲಭೆ ತಡೆಯಬಹುದಿತ್ತು ಎಂದರು.
ನಾಗಮಂಗಲ ಹೋಗುವೆ
ಶುಕ್ರವಾರ ನಾಗಮಂಗಲಕ್ಕೆ ಹೋಗುತ್ತೇನೆ. ಇಡೀ ನಾಗಮಂಗಲ ಜನತೆ ಮುಸ್ಲಿಂ ಸಮಾಜಕ್ಕೆ ಬಹಿಷ್ಕಾರ ಹಾಕಿ, ಅವರ ಬಳಿ ವ್ಯಾಪಾರ ಮಾಡಬೇಡಿ ಎಂದು ಕರೆ ಕೊಡುತ್ತೇನೆ. ಹಿಂದುಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದರು.
ರಟ್ಟಿಹಳ್ಳಿ ನಿಷೇಧ ಕುರಿತು ಹೈಕೋರ್ಟ್ ಮೊರೆ
ಗುರುವಾರ ಸಂಜೆ ರಟ್ಟಿಹಳ್ಳಿಯಲ್ಲಿ ಹಿಂದು ಮಹಾಸಭಾ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಇದು ಕರ್ನಾಟಕವೋ ಅಥವಾ ಪಾಕಿಸ್ತಾನವೋ. ಮುಸ್ಲಿಮರಿಗೆ ಕುಮ್ಮಕ್ಕು ಕೊಡಲು ನಿರ್ಬಂಧ ಹೇರಿದ್ದೀರಾ. ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಎಲ್ಲೂ ಗಲಭೆ ಆಗಿಲ್ಲ. ಈ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವೆ ಎಂದರು ಮುತಾಲಿಕ್.
ಸಚಿವ ಜಮೀರ್ ಅಹ್ಮದ್‌ಗೆ ಸವಾಲು
ಸಾವಿರಾರು ಎಕರೆ ವಕ್ಫ್ ಆಸ್ತಿ ನುಂಗಿರುವ ಕುರಿತು ಅನ್ವರ್ ಮಣಿಪ್ಪಾಡಿ ದಾಖಲೆ ಸಮೇತ ಬಿಡುಗಡೆ ಮಾಡಿರುವ ವರದಿಯನ್ನು ಸಚಿವ ಜಮೀರ್ ಅಹ್ಮದ್ ಅವರು ತಾಕತ್ ಇದ್ದರೆ ಜಾರಿಗೊಳಿಸಲಿ ಎಂದು ಪ್ರಮೋದ ಮುತಾಲಿಕ್ ಸವಾಲು ಹಾಕಿದರು. ಸಂಸತ್‌ನಲ್ಲಿ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿರುವುದನ್ನು ಸ್ವಾಗತಿಸುವೆ. ರಾಜ್ಯಾದ್ಯಂತ ಸಹಿ ಅಭಿಯಾನ ಮಾಡುತ್ತೇವೆ. ಸುಮಾರು 10 ಲಕ್ಷ ಎಕರೆ ಆಸ್ತಿ ವಕ್ಫ್ ಬೋರ್ಡ್ ಬಳಿ ಇದೆ. ಜಗತ್ತಿನ 50ಕ್ಕೂ ಅಧಿಕ ಮುಸ್ಲಿಂ ರಾಷ್ಟ್ರಗಳಷ್ಟು ಜಾಗ ದೇಶದ ವಕ್ಫ್ ಬೋರ್ಡ್‌ನಲ್ಲಿದೆ. ಭವಿಷ್ಯದಲ್ಲಿ ಹಿಂದುಗಳ ಸ್ಥಿತಿ ಏನಾಗಬಹುದು ಎಂದು ಊಹಿಸಿ ಎಂದರು ಮುತಾಲಿಕ್.