

ಹಾವೇರಿ: ಕನ್ನಡದ ಪರಿಸ್ಥಿತಿ ಶೋಚನೀಯವಾಗಿದ್ದ ಕಾಲದಲ್ಲಿ ನಾಡು-ನುಡಿಗಾಗಿ ದುಡಿದ ಸಾಹಿತಿ, ಸಂಶೋಧಕರ ಹೆಸರಲ್ಲಿ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರು ಹಾಗೂ ರಾಜಪುರೋಹಿತರ ಹೆಸರು ಅತ್ಯಂತ ಪ್ರಮುಖವಾದವು. ಇವರು ಕನ್ನಡ ಸಾಹಿತ್ಯದ ದಿಗ್ಗಜರು ಎಂದು ಪ್ರಾಚಾರ್ಯ ಡಿ.ಟಿ.ಪಾಟೀಲ ಹೇಳಿದರು. ತಾಲೂಕಿನ ಕಳ್ಳಿಹಾಳ ಎಸ್.ಸಿ.ಎಸ್.ಟಿ ವಸತಿಯುತ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ರಾಜ್ಯ ಸರ್ಕಾರ ಗಳಗನಾಥ ಮತ್ತು ನಾ.ಶ್ರೀ ರಾಜಪುರೋಹಿತ ಪ್ರತಿಷ್ಠಾನದಿಂದ ಗುರುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನಕ, ಷರೀಪ, ಸರ್ವಜ್ಞ ಮುಂತಾದವರು ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಸಂತರ, ಶರಣರ ದಾರ್ಶನಿಕರ ಚರಿತ್ರೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಹಿರೇಕೆರೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಉಪನ್ಯಾಸಕ ಡಾ.ಕಾಂತೇಶರಡ್ಡಿ ಗೋಡಿಹಾಳ ಅವರು ಗಳಗನಾಥರು ಮತ್ತು ನಾ.ರಾಜಪುರೋಹಿತರ ಬದುಕು-ಬರಹ ಕುರಿತು ಮಾತನಾಡಿದರು. ಕನ್ನಡ ಕಾದಂಬರಿಯ ಉನ್ನತ ಸೌಧದ ತಳಪಾಯವನ್ನು ಹಾಕಿದವರೇ ಕನ್ನಡ ಕಾದಂಬರಿಯ ಪಿತಾಮಹ ಗಳಗನಾಥರು. ಇತಿಹಾಸ ಸಂಶೋಧಕ ರಾಜಪುರೋಹಿತರು ಇಂದಿನ ಸಂಶೋಧಕರಿಗೆ ಪ್ರೇರಣೆ ಹಾಗೂ ಸ್ಪೂರ್ತಿಯಾಗುತ್ತಾರೆ. ಈ ಮಹನೀಯರು ಹಾವೇರಿ ತಾಲೂಕಿನ ಅಗಡಿ ಗ್ರಾಮದವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು. ರಟೀಹಳ್ಳಿ ಪ್ರಿಯದರ್ಶಿನಿ ಪದವಿ ಕಾಲೇಜ್‌ನ ಉಪನ್ಯಾಸಕ ಡಾ.ಚಾಮರಾಜ ಕಮ್ಮಾರ ಶಾಸನಗಳ ಓದು ಕುರಿತು ಮಾತನಾಡಿದರು. ಶಿಲಾಶಾಸನಗಳು, ಸ್ಮಾರಕಗಳು ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕಂಡುಬಂದಿವೆ. ಶಾಸನಗಳ ಹಾಗೂ ಸ್ಮಾರಕಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಅವುಗಳ ರಕ್ಷಣೆ ನಮ್ಮೆಲ್ಲರ ಜಬಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಇತಿಹಾಸಕಾರರ ಚರಿತ್ರೆಗಳನ್ನು ಅಧ್ಯಯನ ಮಾಡಬೇಕು ಎಂದರು.
ಪ್ರತಿಷ್ಠಾನದ ಸದಸ್ಯರಾದ ವೆಂಕಟೇಶ ಗಳಗನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ. ಬಿ. ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಸದಸ್ಯ ಹನುಮಂತಗೌಡ ಗೊಲ್ಲರ ನಿರೂಪಿಸಿದರು. ಮತ್ತೊಬ್ಬ ಸದಸ್ಯ ಪ್ರಮೋದ ನಲವಾಗಲ ವಂದಿಸಿದರು.