

ಹಾವೇರಿ: ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ವತಿಯಿಂದ ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಡಿ ಜಿಲ್ಲೆಯ 22 ಕ್ಷಯ ರೋಗಿಗಳನ್ನು ದತ್ತು ಪಡೆದುಕೊಂಡು, ಕನಿಷ್ಠ ಆರು ತಿಂಗಳು ಅಥವಾ ಗುಣ ಹೊಂದುವವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಧು ಕೆ.ಆರ್. ತಿಳಿಸಿದರು.
ನಗರದ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷಯ ರೋಗವು ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಯಾಗಿದೆ. ಕೂದಲು ಹಾಗೂ ಉಗುರುಗಳನ್ನು ಬಿಟ್ಟು ಬೇರೆ ಯಾವ ಜಾಗದಿಂದಲೂ ಬರುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಕ್ಷಯರೋಗದ (ಟಿಬಿ) ಬಗ್ಗೆ ಹೆಚ್ಚು ಜಾಗೃತರಾಗಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಪೌಷ್ಟಿಕ ಆಹಾರ ಇಲ್ಲದಿರುವುದು, ಮದ್ಯಪಾನ ಹಾಗೂ ಧೂಮಪಾನಕ್ಕೆ ಒಳಗಾವುದು, ಎಚ್‌ಐವಿ, ಶುಗರ್ ಕಾಯಿಲೆ ಹಾಗೂ ಇಕ್ಕಟ್ಟಾದ ಜಾಗದಲ್ಲಿ ಬಹಳಷ್ಟು ಜನರು ವಾಸವಿರುವುದರಿಂದ ರೋಗ ಬರುವ ಸಾಧ್ಯತೆಗಳು ಇರುತ್ತದೆ. ಪ್ರತಿವರ್ಷ ಶೇ.7ರಷ್ಟು ಸಂಖ್ಯೆ ಜನರು ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಶೇ.45ರಿಂದ 55ರಷ್ಟು ಗ್ರಾಮೀಣ ಭಾಗದ ಜನರು ಈ ಕಾಯಿಲೆಗೆ ಒಳಗಾಗುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ 1,676 ಜನರು ಕ್ಷಯ ರೋಗಕ್ಕೆ ತುತ್ತಾಗಿದ್ದರು. ಈ ವರ್ಷ 1,077 ಜನರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. 15 ದಿನಗಳ ನಿರಂತರ ಕೆಮ್ಮು, ಕಫ, ಸಂಜೆಯಾದರೆ ಜ್ವರ, ಊಟ ಸೇರದಿರುವುದು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು ಹೀಗೆ ಲಕ್ಷಣಗಳಾಗಿವೆ. ಅಂಥವರು ಕೂಡಲೇ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬೇಕು. ನಮ್ಮ ಆಸ್ಪತ್ರೆಯಲ್ಲೇ 40 ಜನರು ಕ್ಷಯ ರೋಗಿಗಳು ಪತ್ತೆಯಾಗಿದ್ದಾರೆ. ಅದರಲ್ಲಿ 22 ಜನರನ್ನು ದತ್ತು ಪಡೆದಿದ್ದೇವೆ. ಸರ್ಕಾರದಿಂದ ಟಿಬಿ ರೋಗಿಗಳಿಗೆ ತಲಾ 1,000 ರೂ., ಸಿಗುತ್ತದೆ. ಆಸ್ಪತ್ರೆಯಿಂದ ಹೆಚ್ಚಿನ ಕಾಳಜಿ ವಹಿಸಿ, ಜಿಲ್ಲಾಸ್ಪತ್ರೆ ಸಹಕಾರದೊಂದಿಗೆ ಔಷಧ ನೀಡುತ್ತೇವೆ ಎಂದರು.
ಆಸ್ಪತ್ರೆಯಿಂದ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಡಾ.ರಾಘವಾಂಕ, ರಂಜಿತಾ ಬಸೇಗಣ್ಣಿ, ಜಿಲ್ಲಾ ಕ್ಷಯರೋಗ ಸಂಯೋಜನಾಧಿಕಾರಿ ಮುಬಾರಕ, ಇತರರಿದ್ದರು.