ಜಿಂದಾಲ್ ವಿಷಯದಲ್ಲಿ ಸರ್ಕಾರ ಕೀಳು ಮಟ್ಟಕ್ಕೆ ಇಳಿದಿದೆ; ಎಸ್.ಆರ್.ಹಿರೇಮಠ ಬೇಸರ

Published on

ಹಾವೇರಿ: ಜಿಂದಾಲ್ ಕಂಪನಿಗೆ ಕಡಿಮೆ ದರದಲ್ಲಿ ರೈತರ ಜಮೀನು ನೀಡಿರುವ ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ. ಜಿಂದಾಲ್ ವಿಚಾರದಲ್ಲಿ ಸರ್ಕಾರ ಕೀಳು ಮಟ್ಟಕ್ಕೆ ಇಳಿದಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಬೇಸರ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯ, ಎಚ್.ಕೆ.ಪಾಟೀಲ ಆಗ ವಿರೋಧಿಸಿದ್ದರು. ಈಗ ಇವರೇ ಅಧಿಕಾರ ಬಂದ ಬಳಿಕ ರೈತರ ಜಮೀನು ನೀಡುವ ಮೂಲಕ ಕೀಳುಮಟ್ಟದ ರಾಜಕಾರಣ ಪ್ರದರ್ಶಿಸಿದ್ದಾರೆ. ರೈತರ ಭವಿಷ್ಯ ಹಾಳು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ರೈತರ ಹಿತ ಕಾಪಾಡುವಂತೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ, ಡಾ.ಎಸ್.ಎಲ್.ಪವಾರ, ಸಿ.ಎನ್.ದೀಪಕ, ಅಮರನಾಥ ಬೂತೆ, ಎಂ.ಸಿ.ಹಾವೇರಿ, ಚರಣರಾಜ್ ರೊಡ್ಡನವರ, ಇತರರಿದ್ದರು.

ಕೆಆರ್‌ಎಸ್‌ಗೆ ಬೆಂಬಲ:: ಶಿಗ್ಗಾಂವಿ ಉಪ ಚುನಾವಣೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಹಿಂದೆಂದೂ ಕಾಣದಂತ ಕೆಲಸಗಳುಪಕ್ಷದಿಂದ ಆಗುತ್ತಿವೆ. ನಿರುದ್ಯೋಗ, ಬಡತನ, ಅಸಮಾನತೆ, ಅಸ್ಪೃಶ್ಯತೆ ನಿವಾರಣೆಯಿಂದ ರಾಷ್ಟ್ರವನ್ನು ಕಟ್ಟಬೇಕಿದೆ. ಕಳೆದ ಏಳು ದಶಕಗಳಿಂದ ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟವಾಗಿವೆ. ಹಣದ ಪ್ರಭಾವ, ಕ್ರಿಮಿನಲ್ ಬ್ಯಾಗ್ರೌಂಡ್ ಹಿನ್ನೆಲೆಯಿಂದ ಬಂದವರು ರಾಜಕಾರಣವನ್ನು ದಂಧೆ ಮಾಡಿಕೊಂಡಿದ್ದಾರೆ. ಹೊಸ ರಾಷ್ಟ್ರದ ಪರಿಕಲ್ಪನೆಯಿಂದ ಅಭಿವೃದ್ಧಿ ಕನಸು ಕಂಡಿರುವ ಕೆಆರ್‌ಎಸ್‌ಗೆ ಜನ ಬೆಂಬಲಿಸುವ ಅಗತ್ಯವಿದೆ. ನಾವೂ ಕೂಡ ಬೆಂಬಲಿಸುತ್ತೇವೆ ಎಂದರು ಹಿರೇಮಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net