ಹೊರ ಜಿಲ್ಲೆಗಳಿಗೆ ಕ್ರೀಡಾಪಟುಗಳ ಪಲಾಯನ !; ಭರವಸೆ ಮೂಡಿಸಲಿ ಕ್ರೀಡಾ ವಸತಿ ಶಾಲೆಗಳು; ಬಾಲಕ, ಬಾಲಕಿಯರ ಹಾಸ್ಟೆಲ್‌ಗೆ ಬೇಕು ಮೂಲ ಸೌಲಭ್ಯ

15 HVR 8 B
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಕೆಸರು ಗದ್ದೆಯಂತಾಗಿರುವ ಜಿಲ್ಲಾ ಕ್ರೀಡಾಂಗಣ, ಕ್ರೀಡಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ನುರಿತ ತರಬೇತುದಾರರ ಕೊರತೆ, ಕ್ರೀಡಾ ವಸತಿ ಶಾಲೆಗೆ ಅಗತ್ಯ ಮೂಲ ಸೌಲಭ್ಯಗಳ ಕೊರತೆ, ಹೀಗೆ ಹತ್ತಾರು ಸಮಸ್ಯೆಗಳಿಂದ ಜಿಲ್ಲೆಯ ಕ್ರೀಡಾಪಟುಗಳು ಸೊರಗಿ ಹೋಗಿದ್ದಾರೆ. ಜಿಲ್ಲೆಯಿಂದಲೇ ಸ್ಪರ್ಧಿಸಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕಿದ್ದ ಹಲವು ಕ್ರೀಡಾಪಟುಗಳು ದಕ್ಷಿಣ ಕರ್ನಾಟಕ ಸೇರಿ, ಹೊರ ಜಿಲ್ಲೆಗಳಿಗೆ ಪಲಾಯನ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದಲ್ಲಿ ಸ್ಥಾಪಿಸಿರುವ ಬಾಲಕರ ಮತ್ತು ಬಾಲಕಿಯರ ಕ್ರೀಡಾ ವಸತಿ ನಿಲಯಗಳ ನಿರ್ವಹಣೆಗೆ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಆದರೆ, ಸಿಂಥೆಟಿಕ್ ಕ್ರೀಡಾಂಗಣ ಸೇರಿ ಅಗತ್ಯ ಮೂಲ ಸೌಲಭ್ಯಗಳು ಇಲ್ಲದ ಕಾರಣ ಕ್ರೀಡಾಳುಗಳಿಗೆ ಸೂಕ್ತ ವೇದಿಕೆ ಸಿಗದಂತಾಗಿದೆ. ಹೀಗಾಗಿ ರಾಜ್ಯ ಮಟ್ಟದಲ್ಲಿ ಕೆಲ ಸ್ವಯಂ ಸಾಮರ್ಥ್ಯದ ಮಕ್ಕಳು ದಾಪುಗಾಲಿಟ್ಟಿದ್ದು, ಹಲವರು ಅವಕಾಶ ವಂಚಿತರಾಗಿದ್ದಾರೆ.

ಕ್ರೀಡಾ ಇಲಾಖೆಯಿಂದ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ 2009ರಲ್ಲಿ ಜಿಲ್ಲಾ ಕ್ರೀಡಾ ವಸತಿ ನಿಲಯ ಆರಂಭಿಸಲಾಯಿತು. 2012ರಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸಿದ ಕಟ್ಟಡ ಉದ್ಘಾಟನೆಗೊಂಡಿತು. ಆರಂಭದಲ್ಲಿ ಒಂದೇ ಕಟ್ಟಡದಲ್ಲಿ ಬಾಲಕ, ಬಾಲಕಿಯರ ಹಾಸ್ಟೆಲ್ ನಡೆಯುತ್ತಿತ್ತು. ಕೆಲ ಸಮಸ್ಯೆಗಳ ಕಾರಣಕ್ಕೆ ಬಾಲಕಿಯರ ಹಾಸ್ಟೆಲ್ ಬಂದ್ ಆಗಿತ್ತು.

ಬಾಲಕರ ಕ್ರೀಡಾವಸತಿ ನಿಲಯದ ಹಿಂಭಾಗದಲ್ಲಿ ಬಾಲಕಿಯರ ಹಾಸ್ಟೆಲ್ ಪುನಾರಂಭಗೊಂಡಿದ್ದು, ಜೂನ್ 3, 2025ರಂದು ಉದ್ಘಾಟನೆಗೊಂಡಿದೆ. ಸದ್ಯ ಬಾಲಕರ ಹಾಸ್ಟೆಲ್‌ನಲ್ಲಿ 52 ಹಾಗೂ ಬಾಲಕಿಯರ ಹಾಸ್ಟೆಲ್‌ನಲ್ಲಿ 23 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಹಾಸ್ಟೆಲ್‌ಗೆ ಸುತ್ತಲೂ ಕಾಂಪೌಂಡ್, ಸಿಸಿಟಿವಿ ಕ್ಯಾಮರಾ, ಬಿಸಿನೀರಿನ ವ್ಯವಸ್ಥೆ, ಬೀದಿದೀಪ, ರಾತ್ರಿ ಭದ್ರತಾ ಸಿಬ್ಬಂದಿ ನೇಮಕ ಆಗಬೇಕಿದೆ. ಈ ಮೂಲಕ ಜಿಲ್ಲೆಯ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿ, ಜಿಲ್ಲೆಯ ಹೆಸರು ಹಸಿರಾಗುವಂತೆ ಮಾಡಬೇಕಿದೆ.

ಸಿಸಿಟಿವಿ ಬೇಕು :

ಬಾಲಕಿಯರ ಹಾಸ್ಟೆಲ್‌ನ ನೂತನ ಕಟ್ಟಡಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿಲ್ಲ. ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ನೇಮಿಸಿಲ್ಲ. ಹೀಗಾಗಿ ಹಲವು ಬಾರಿ ಮೋಟಾರ್ ವೈರ್ ಕಳ್ಳತನ ಆಗಿದೆ. ಈ ಕೂಡಲೇ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಭದ್ರತೆಗೆ ಅಗತ್ಯ ಸಿಬ್ಬಂದಿ ನೇಮಿಸಬೇಕೆಂಬುದು ಕ್ರೀಡಾಪ್ರೇಮಿಗಳ ಆಗ್ರಹವಾಗಿದೆ.

ಒಬ್ಬರೇ ಖಾಯಂ ಅಧಿಕಾರಿ !

ಜಿಲ್ಲೆಯಲ್ಲಿ ಇಲಾಖೆಯ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್. ಒಬ್ಬರೇ ಖಾಯಂ ಅಧಿಕಾರಿ. ಉಳಿದ 20 ಸಿಬ್ಬಂದಿ ಗುತ್ತಿಗೆ/ಹೊರ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದಾರೆ. ತಾಲೂಕು ಕ್ರೀಡಾಂಗಣಕ್ಕೆ ತಲಾ ಒಬ್ಬ ಸೆಕ್ಯುರಿಟಿ, ಕ್ರೀಡಾ ವಸತಿ ನಿಲಯಕ್ಕೆ ಅಥ್ಲೆಟಿಕ್ ಕೋಚ್ ಆಗಿ ಪ್ರದೀಪ ಹಾಗೂ ಹಾಕಿ ಕೋಚ್ ಆಗಿ ಸುಭಾಷ ಶಂಕರಿಕೊಪ್ಪ ತರಬೇತಿ ನೀಡುತ್ತಿದ್ದಾರೆ. ಎರಡೂ ಹಾಸ್ಟೆಲ್‌ಗೆ ಇಬ್ಬರು ರಾತ್ರಿ ಕಾವಲುಗಾರರು, ಸ್ವಚ್ಛತೆಗೆ ಇಬ್ಬರನ್ನು ನೇಮಿಸಲಾಗಿದೆ. ಇಲಾಖೆಗೆ ಅಧಿಕಾರಿ, ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಭರ್ಜರಿ ಭೋಜನ ಸೌಲಭ್ಯ

ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸರ್ಕಾರ ಭರ್ಜರಿ ಭೋಜನದ ವ್ಯವಸ್ಥೆ ಮಾಡಿದೆ. ಒಬ್ಬ ವಿದ್ಯಾರ್ಥಿಗೆ ದಿನಕ್ಕೆ 196 ರೂ.ಯಂತೆ ತಿಂಗಳಿಗೆ ಅಂದಾಜು 5,880 ರೂ. ಖರ್ಚು ಮಾಡುತ್ತಿದೆ. ಕಳೆದ ವರ್ಷ ಯಾದಗಿರಿಯ ಮಲ್ಲಿಕಾರ್ಜುನ ಎಂಬುವವರು ಊಟದ ಟೆಂಡರ್ ಪಡೆದಿದ್ದು, ಸದ್ಯದಲ್ಲೇ ಹೊಸ ಟೆಂಡರ್ ಆಗಲಿದೆ. ಇಡ್ಲಿ, ದೋಸೆ, ರೊಟ್ಟಿ, ಚಪಾತಿ, ಚಿಕನ್, ಮಟನ್, ಮೊಟ್ಟೆಗಳು, ಮೊಳಕೆ ಕಾಳುಗಳು, ಡ್ರೈಫ್ರೂಟ್ಸ್, ಜ್ಯೂಸ್, ಹಣ್ಣಿನ ಸಲಾಡ್, ಹಾಲು, ಸೇರಿದಂತೆ ಕ್ರೀಡಾಪಟುಗಳಿಗೆ ಅಗತ್ಯವಿರುವ ಪ್ರೋಟೀನ್ ಅಂಶಗಳುಳ್ಳ ಆಹಾರವನ್ನು ನೀಡಲಾಗುತ್ತಿದೆ. ಈ ಹಾಸ್ಟೆಲ್‌ನ ಸಿಬ್ಬಂದಿ ಮೆನು ಚಾರ್ಟ್ ಪ್ರಕಾರ ಆಹಾರ ನೀಡುತ್ತಿದ್ದಾರೆ. ಆದರೆ, ಕೆಲವೊಮ್ಮೆ ಮೆನುವಿನ ಕೆಲ ಐಟಂಗಳು ಇರುವುದಿಲ್ಲ ಎಂಬ ದೂರು ಇದೆ.

ಸೋರುವ ಕಿಚನ್

ಬಾಲಕರ ಕ್ರೀಡಾ ವಸತಿಯ ಹಳೆಯ ಕಟ್ಟಡದ ಅಡುಗೆ ಮನೆ ಸೋರುತ್ತಿದೆ. ಮೊದಲ ಮಹಡಿಯ ಶೌಚಗೃಹದ ನೀರು ಕಿಚನ್‌ನಲ್ಲಿ ಲೀಕ್ ಆಗುತ್ತಿದೆ. ಹಾಗಾಗಿ, ಗಬ್ಬು ವಾಸನೆಯಿಂದ ನಾರುತ್ತಿದೆ. ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಕೂಡಲೇ ದುರಸ್ಥಿ ಮಾಡಿಸುವಂತೆ ನಿರ್ಮಿತಿ ಕೇಂದ್ರಕ್ಕೆ ಸೂಚಿಸಿದ್ದರು. ಆದರೂ ಈವರೆಗೆ ದುರಸ್ಥಿ ಕಾರ್ಯ ಮಾಡಿಲ್ಲ. ಹಾಗಾಗಿ, ಸದ್ಯಕ್ಕೆ ಬಾಲಕಿಯರ ಹಾಸ್ಟೆಲ್‌ನಿಂದ ಅಡುಗೆ ಮಾಡಿಸಲಾಗುತ್ತಿದೆ ಎಂದು ಕ್ರೀಡಾ ಇಲಾಖೆ ಅಧಿಕಾರಿ ಹೇಳಿದರು.

ಆಯ್ಕೆ ಪ್ರಕ್ರಿಯೆ ಹೇಗೆ ?

ಗ್ರಾಮೀಣ ಭಾಗದಲ್ಲಿ ಕ್ಯಾಂಪ್‌ಗಳನ್ನು ಮಾಡಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ. 6ನೇ ತರಗತಿಯಿಂದ 10ನೇ ತರಗತಿವರೆಗೆ ಹಾಸ್ಟೆಲ್, ಊಟದ ಸೌಲಭ್ಯ ನೀಡಲಾಗುತ್ತದೆ. ಜತೆಗೆ ತರಬೇತುದಾರರಿಂದ ಕ್ರೀಡೆಗೆ ತರಬೇತಿ ನೀಡಲಾಗುತ್ತದೆ. ಆ ವಿದ್ಯಾರ್ಥಿಗಳು ತಮಗಿಷ್ಟವಾದ ಶಾಲೆಗೆ ದಾಖಲಾತಿ ಮಾಡಿಸಬಹುದು. ಆಯ್ಕೆವೇಳೆ ಯಾವುದೇ ಮೀಸಲಾತಿ ಇರುವುದಿಲ್ಲ. ದೈಹಿಕ ಸಾಮರ್ಥ್ಯ ಮಾತ್ರ ಪರಿಗಣಿಸಲಾಗುತ್ತದೆ ಎಂಬುದು ಗಮನಾರ್ಹ ಸಂಗತಿ.

ಕೋಟ್:  

ಕ್ರೀಡಾ ವಸತಿ ನಿಲಯದಲ್ಲಿ ಮೆನು ಪ್ರಕಾರ ರುಚಿಕರ ಅಡುಗೆ ನೀಡಲಾಗುತ್ತಿದೆ. ಜಿಪಿಎಸ್ ಫೋಟೋ ಸಮೇತ ನಿತ್ಯವೂ ಇಲಾಖೆಗೆ ರವಾನಿಸಲಾಗುತ್ತಿದೆ. ಈ ಹಿಂದೆ ತರಬೇತುದಾರರ ಕೊರತೆ ಇತ್ತು. ಇದೀಗ ಅಥ್ಲೆಟಿಕ್ ಮತ್ತು ಹಾಕಿಗೆ ಇಬ್ಬರು ತರಬೇತುದಾರರು ಇದ್ದಾರೆ. ಭವಿಷ್ಯದಲ್ಲಿ ಜಿಲ್ಲೆಯ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕಳುಹಿಸಲು ಅಗತ್ಯ ತಯಾರಿ ಮಾಡುತ್ತೇವೆ.

- ಲತಾ ಬಿ.ಎಚ್., ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net