

ಹಾವೇರಿ: ಹಿರಿಯ ನಾಗರಿಕರ ಸಹಾಯಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಕಟ್ಟಡದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಇನ್ನುಮುಂದೆ ಹಿರಿಯ ನಾಗರಿಕರು ಯಾವುದೇ ಸಮಸ್ಯೆಗೆ ಸಿಲುಕಿದಲ್ಲಿ 1090 ಅಥವಾ 112ಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಎಸ್‌ಪಿ ಅಂಶುಕುಮಾರ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ವತಿಯಿಂದ ನಗರದ ಎಸ್‌ಪಿ ಕಚೇರಿಯಲ್ಲಿ ಆಯೋಜಿಸಿದ್ದ ‘ಅನುಭವ ಮಂಟಪ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
60 ವರ್ಷ ಪೂರ್ಣಗೊಂಡ ಹಿರಿಯ ನಾಗರಿಕರಿಗಾಗಿ ಆಪ್ತ ಸಮಾಲೋಚನೆ ಹಾಗೂ ಪೊಲೀಸ್ ಮಧ್ಯಸ್ಥಿಕೆ, ಉಚಿತ ಕಾನೂನು ನೆರವು ನೀಡುವ ಉದ್ದೇಶದಿಂದ ಚಿತ್ರದುರ್ಗದ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ವತಿಯಿಂದ ಅನುಭವ ಮಂಟಪ ಹಿರಿಯ ನಾಗರಿಕರ ಸಹಾಯವಾಣಿ ರಂಭಿಸಲಾಗುತ್ತಿದೆ. ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೇಂದ್ರದ ಸದಸ್ಯ ಕಾರ್ಯದರ್ಶಿ ಶಂಕರಪ್ಪ ವಿ.ಕೆ. ಸಹಾಯವಾಣಿ ಕೇಂದ್ರದಿಂದ ಲಭ್ಯವಿರುವ ವೃದ್ಧಾಶ್ರಮ, ಕೌಟುಂಬಿಕ ಸೇವೆ, ವೈದ್ಯಕೀಯ ಸೇವೆ, ರೆಫೆರಲ್ ಸೇವೆ, ಮಾಶಾಸನ, ಹಾಗೂ ಹಿರಿಯ ನಾಗರಿಕರ ಗುರುತಿನ ಕಾರ್ಡ್, ಆಯುಷ್ಮಾನ್ ವಯೋವಂದನ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ ಶಿರಕೋಳ ಸಮಾರಂಭಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರ ಅಹವಾಲು ಆಲಿಸಿದರು. ಎಲ್ಲ ರೀತಿಯ ಕಾನೂನು ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಮುಖ್ಯಮಂತ್ರಿ ಪದಕ ಪಡೆದ ಎಸ್‌ಪಿ ಅಂಶುಕುಮಾರ, ಎಎಸ್‌ಪಿ ಎಲ್.ವೈ ಶಿರಕೋಳ ಅವರನ್ನು ಹಾಗೂ ನಿವೃತ್ತ ನೌಕರರು, ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆಶು ನದಾಫ್, ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶಂಕರಪ್ಪ, ಸಿಪಿಐ ಶಶಿಧರ, ಪ್ರೇಮಾ ಮುಳಗುಂದ, ಧೀರೇಂದ್ರ ಏಕಬೋಟೆ, ಎಚ್.ಆರ್ ಯಡಹಳ್ಳಿ, ದಯಾನಂದ ಕಲಕೋಟಿ, ಮುತ್ತಣ್ಣ, ಹಿರಿಯ ನಾಗರಿಕರು ಭಾಗವಹಿಸಿದ್ದರು.
ಅರುಣಾ ಪ್ರಾರ್ಥಿಸಿದರು. ನಾಗರಾಜ ಇಚ್ಚಂಗಿ ನಿರೂಪಿಸಿದರು.