

ಹಾವೇರಿ: ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ, ಮರಳುಗಾರಿಕೆ, ಮಟಕಾ, ಇಸ್ಪೀಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ದಲಿತರು ಸೇರಿದಂತೆ ಎಲ್ಲ ಸಮುದಾಯದವರು ಬಲಿಯಾಗುತ್ತಿದ್ದಾರೆ. ಪೊಲೀಸ್ ಇಲಾಖೆ ಇದನ್ನು ಮಟ್ಟ ಹಾಕಬೇಕು. ದಲಿತರ ಹಕ್ಕುಗಳ ರಕ್ಷಣೆಗೆ ಬದ್ಧವಾಗಬೇಕು ಎಂಬ ಒಕ್ಕೋರಲ ಆಗ್ರಹ ಕೇಳಿ ಬಂತು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಅಹವಾಲುಗಳ ಸುರಿಮಳೆಗೈದರು.
ಕಳೆದ ಸಭೆಯಲ್ಲಿನ ಅಹವಾಲುಗಳ ಕುರಿತು ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂಬುದನ್ನು ಮೊದಲು ತಿಳಿಸಿ. ನಂತರ ಹೊಸ ಅಹವಾಲು ಕೇಳಿ ಎಂದು ರಮೇಶ ಆನವಟ್ಟಿ ಆಗ್ರಹಿಸಿದರು. ಹಲಗೇರಿ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ಹಾವಳಿ, ದೇವಗಿರಿ ಬೀಟ್ ಪೊಲೀಸರು ಬರಲ್ಲ. ದೇವಸ್ಥಾನಗಳಲ್ಲಿ ಬೀಟ್ ಪುಸ್ತಕ ಇಟ್ಟಿಲ್ಲ. ಎಸ್‌ಸಿಎಸ್‌ಟಿ ಕಾಲನಿಗೆ ಅನ್ಯಾಯ ಆಗಿದೆ. ದಲಿತರ ಕೇಸ್‌ಗಳು ಹೆಚ್ಚಾಗಿ ಬಿ ರಿಪೋರ್ಟ್ ಹಾಗೂ ಕೌಂಟರ್ ಕೇಸ್ ಹಾಕಲಾಗುತ್ತಿದೆ ಎಂಬಿತ್ಯಾದಿ ಪ್ರಶ್ನೆಗಳು ಕೇಳಿಬಂದಿದ್ದವು. ಬೀಟ್ ಪುಸ್ತಕದ ಬದಲಾಗಿ ಜಿಪಿಎಸ್ ಆ್ಯಪ್ ಮೂಲಕ ಬೀಟ್ ಪೊಲೀಸರ ರಾತ್ರಿ ಗಸ್ತು ಗಮನಿಸಲಾಗುತ್ತಿದೆ. ಕೌಂಟರ್ ಕೇಸ್ ಕೊಟ್ಟರೆ ತೆಗೆದುಕೊಳ್ಳಬೇಕೆಂಬ ನಿಯಮವಿದೆ. ಬಿ ರಿಪೋರ್ಟ್ ಬಗ್ಗೆ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು. ಉಳಿದಂತೆ ಆಯಾ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ಇನ್ಸ್‌ಪೆಕ್ಟರ್ ಎಂ.ಬಿ ಗೌಡಪ್ಪಗೌಡ್ರ ವಿವರಿಸಿದರು.
ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯರೊಬ್ಬರು ಮಾತನಾಡಿ, ಎಸ್‌ಪಿ ಸಾಹೇಬರು ಒಂದು ವರ್ಷ ತಾವು ಅಟ್ರಾಸಿಟಿ ಸಭೆಗೆ ಬಂದಿಲ್ಲ. ನಿಮ್ಮ ಕೆಳ ಅಧಿಕಾರಿಗಳನ್ನು ಕಳುಹಿಸುತ್ತಿದ್ದೀರಿ. ಇದರಿಂದ ಹಲವು ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಹಾಗಾಗಿ ತಾವು ಮುಂದಿನ ಸಭೆಗೆ ಹಾಜರಾಗಬೇಕು ಎಂದು ಮನವಿ ಮಾಡಿದರು. ನೆಗಳೂರ ದಲಿತ ಸಮಾಜದವರಿಗೆ ಹಿಂದೆ ತಹಸೀಲ್ದಾರ್ ಹಕ್ಕುಪತ್ರ ನೀಡಿದ್ದರು. ಆದರೆ ಈವರೆಗೂ ಇ ಸ್ವತ್ತು ಆಗುತ್ತಿಲ್ಲ ಎಂದು ಸಂಜೀವಗಾಂಧಿ ವಿವರಿಸಿದರು. ಹಾವೇರಿ ಶಹರ ಠಾಣೆಯಂತೆ ಪ್ರತಿ ತಿಂಗಳು ಎಲ್ಲ ಠಾಣೆಗಳಲ್ಲಿ ಎಸ್‌ಸಿಎಸ್‌ಟಿ ಸಭೆ ಆಯೋಜಿಸಿ. ನಮ್ಮನ್ನು ಪರಿಗಣಿಸಿ, ಹೊರಗೆ ಇಡಬೇಡಿ ಎಂದು ಮಂಜುಳಾ ಆಗ್ರಹಿಸಿದರು.
ಎಎಸ್‌ಪಿ ಲಕ್ಷ್ಮಣ ಶಿರಕೋಳ, ಉಪವಿಭಾಗಾಧಿಕಾರಿ ಎಚ್.ಬಿ ಚನ್ನಪ್ಪ, ಡಿವೈಎಸ್‌ಪಿಗಳಾದ ಎಂ.ಎಸ್ ಪಾಟೀಲ, ಲೋಕೇಶ, ಗುರುಶಾಂತಪ್ಪ, ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ವಿವಿಧ ದಲಿತ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಡಿಡಿ ಏನು ಮಾಡುತ್ತಿದ್ದಾರೆ ?
ಹಿರೇಕೆರೂರ ಸಿಪಿಐ ನೀಲಪ್ಪ ಅವರು ದಲಿತ ಯುವಕರನ್ನು ಕರೆಸಿ ನರ ಕಟ್ ಮಾಡುತ್ತೇನೆ. ಒಳಗೆ ಹಾಕುತ್ತೇನೆ ಎಂದು ದಬ್ಬಾಳಿಕೆ ಮಾಡಿದ್ದರು. ದಲಿತ ಹೋರಾಟಗಾರರ ವಿರುದ್ಧ ಕೇಸ್ ಹಾಕಿದ್ದರು. ಇದರ ವಿರುದ್ಧ ಭೀಮ್ ಆರ್ಮಿ ವತಿಯಿಂದ ಹೋರಾಟ ಮಾಡಿದರೂ ಈವರೆಗೂ ಯಾವ ಕ್ರಮ ಜರುಗಿಸಿಲ್ಲ. ದಲಿತರ ಸಭೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಬರಬೇಕಿತ್ತು. ಹಲವೆಡೆ ಅಂಬೇಡ್ಕರ್ ಭವನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ದೇವಸ್ಥಾನವಾಗಿ ಬದಲಾಗಿವೆ. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಏನು ಮಾಡುತ್ತಿದ್ದಾರೆ. ಕೇವಲ ಎಸಿ ರೂಮ್‌ಗೆ ಸೀಮಿತವಾಗಿದ್ದಾರೆ. ದಲಿತರ ಹಕ್ಕುಗಳ ರಕ್ಷಣೆ ಮರೆತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಕೆ.ಸಿ. ಆರೋಪಿಸಿದರು.
ಪೊಲೀಸರೂ ಶಾಮೀಲು ?
ರಾಣೆಬೆನ್ನೂರ ತಾಲೂಕಿನಲ್ಲಿ ಕೆಲವೆಡೆ ದಲಿತರಿಗೆ ಕಟಿಂಗ್ ಮಾಡುತ್ತಿಲ್ಲ. ಬೀಟ್ ಪೊಲೀಸರಿಗೆ ಎಲ್ಲವೂ ಗೊತ್ತಿದೆ. ಆದರೆ, ಸರಿಯಾದ ಕ್ರಮ ಜರುಗಿಸುತ್ತಿಲ್ಲ. ದಲಿತರು ಕೇಸ್ ಕೊಡಲು ಹೋದರೆ ಸರಿಯಾಗಿ ಸ್ಪಂದಿಸಲ್ಲ. ಸಮಾಜ ಕಲ್ಯಾಣ ಇಲಾಖೆಯವರು ಹಾಸ್ಟೆಲ್ ಸೇರಿ ಇತರ ವಿಷಯಗಳಿಗೆ ಎಲ್ಲದಕ್ಕೂ ಹಾರಿಕೆ ಉತ್ತರ ಕೊಡುತ್ತಾರೆ. ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಿ. ರಾಣೆಬೆನ್ನೂರ ಗ್ರಾಮೀಣ ಠಾಣೆ ಬೇಲೂರ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೋಗಿದ್ದ ದಲಿತ ಯುವಕನ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಗ್ರಾಮೀಣ ಠಾಣೆಗೆ ದೂರು ಕೊಡಲು ಹೋದರೆ ರಾತ್ರಿ 11 ಗಂಟೆಯಾದರೂ ದೂರು ಸ್ವೀಕರಿಸಲಿಲ್ಲ. ರಾತ್ರಿ ರಾಜಿ ಮಾಡಿಸುತ್ತಾರೆ.
ಹಾನಗಲ್ಲ ತಾಲ್ಲೂಕಿನಲ್ಲಿ ಅಕ್ರಮ ಸಾರಾಯಿ, ಮಟಕಾ, ಇಸ್ಪೀಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಸಾಕ್ಷಿ ಸಮೇತವಾಗಿ ದೂರು ಕೊಟ್ಟರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದ ದಲಿತರು ಸೇರಿದಂತೆ ಎಲ್ಲ ಸಮಾಜಗಳು ಹಾಳಾಗುತ್ತಿವೆ. ಹಾನಗಲ್ಲ ಹಾಲಿನ ಪುಡಿ ಕೇಸ್ ಬಗ್ಗೆ ಸಾಕ್ಷಿ ಸಮೇತವಾಗಿ ದೂರು ಕೊಡಲು ಹೋದರೆ ಹಾನಗಲ್ಲ ಸಿಪಿಐ ಸ್ಪಂದಿಸಿಲ್ಲ. ಅಧಿಕಾರಿಗಳ ವಿರುದ್ಧ ದೂರು ಕೊಡಲು ಹೋದರೆ ತೆಗೆದುಕೊಳ್ಳಲಿಲ್ಲ. ಹಾನಗಲ್ಲ ಸಿಪಿಐ ಅವರಿಗೆ ಮಟಕಾ, ಇಸ್ಪೀಟ್ ಆಡಿಸುವವರು ಬೇಕಾಗಿದೆ. ಅವರಿಗೆ ಕುರ್ಚಿ ಹಾಕಿ ಕೂರಿಸುತ್ತಾರೆ. ಹೋರಾಟಗಾರರನ್ನು ನಿಲ್ಲಿಸುತ್ತಾರೆ. ದಯವಿಟ್ಟು ಇಂತಹ ಸಿಪಿಐ ನಮಗೆ ಬೇಡ ಎಂದು ಕೆಲವರು ಆಕ್ರೋಶ ಹೊರಹಾಕಿದರು.
ಕೋಟ್:
ನಮ್ಮ ಇಲಾಖೆಯ ಅಹವಾಲುಗಳ ಕುರಿತು 15 ದಿನದಲ್ಲಿ ಕ್ರಮ ತೆಗೆದುಕೊಂಡು ವರದಿ ನೀಡುವಂತೆ ಡಿವೈಎಸ್‌ಪಿ ಅವರಿಗೆ ಸೂಚಿಸಿದ್ದೇನೆ. ಬೇರೆ ಇಲಾಖೆಗಳಿಗೆ ಸಂಬಂಧಪಟ್ಟ ಅಹವಾಲುಗಳ ಕುರಿತು ಪತ್ರದ ಮೂಲಕ ತಿಳಿಸಲಾಗುವುದು. ತೆಗೆದುಕೊಂಡ ಕ್ರಮಗಳ ಕುರಿತು ಮುಂದಿನ ಸಭೆಯಲ್ಲಿ ವರದಿ ನೀಡಲಾಗುವುದು.
- ಅಂಶುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ