

ಹಾವೇರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ, 35,496 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡು, 19 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು ಮದ್ಯ ಮಾರಾಟಗಾರರ ಜತೆ ಶಾಮೀಲಾಗಿರುವ ಆರೋಪವಿದೆ. ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ 15 ದಿನದೊಳಗೆ ವರದಿ ನೀಡಬೇಕು ಎಂದು ಸಚಿವ ಶಿವಾನಂದ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರಿಗೆ ಜು.2ರಂದು ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದರು. ಮರುದಿನದಿಂದಲೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಅಕ್ರಮ ದಂಧೆಕೋರರಿಗೆ ಚುರುಕು ಮುಟ್ಟಿಸಿದ್ದಾರೆ.
ಪರವಾನಗಿ ಪಡೆದ ಬಾರ್, ಮದ್ಯದ ಅಂಗಡಿ ಹಾಗೂ ಮದ್ಯದ ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶವಿದೆ. ಆದರೆ, ಹಲವರು ಅಕ್ರಮವಾಗಿ ಎಲ್ಲೆಂದರಲ್ಲಿ ಮದ್ಯ ಮಾರುತ್ತಿದ್ದಾರೆ. ಇದೇ ಮಾಹಿತಿ ಆಧರಿಸಿ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಿರಾಣಿ ಅಂಗಡಿ, ಕೂಲ್‌ಡ್ರಿಂಕ್ಸ್ ಅಂಗಡಿ, ಹೋಟೆಲ್, ಡಾಬಾ, ಬಸ್ ನಿಲ್ದಾಣ ಹಾಗೂ ಇತರೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದಿದ್ದಾರೆ.
ಹಾನಗಲ್ಲ ಠಾಣೆ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದ ಆರೋಪಿ ಅರ್ಜುನ ಚಿನ್ನಳ್ಳಿ ತನ್ನ ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರುತ್ತಿದ್ದ. ಈತನ ಅಂಗಡಿ ಮೇಲೆ ದಾಳಿ ಮಾಡಿ ಮದ್ಯದ ಟೆಟ್ರಾ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಈತ, ಹಳೇ ಸಮ್ಮಸಗಿ ಗ್ರಾಮದ ಎಸ್.ಐ.ಎಲ್ ಅಂಗಡಿಯ ಮಲ್ಲೇಶಪ್ಪ ಜಾಡರ ಬಳಿ ಮದ್ಯ ಖರೀದಿಸಿ ತರುತ್ತಿದ್ದ. ಹೀಗಾಗಿ, ಮಲ್ಲೇಶಪ್ಪ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಮಂತಗಿಯ ಆರೋಪಿ ಮಲ್ಲಿಕಾರ್ಜುನ ಪರಮೇಶ್ವರ ಶಿರಸಿ, ತನ್ನ ಕೂಲ್‌ಡ್ರಿಂಕ್ ಅಂಗಡಿಯಲ್ಲಿ ಮದ್ಯ ಮಾರುತ್ತಿದ್ದ. ಆಡೂರು ಗೊಂದಿ ಕ್ರಾಸ್‌ನ ಅಮೃತ ಕರಾವಳಿ ಹೋಟೆಲ್ ಬಳಿ ಮದ್ಯ ಮಾರುತ್ತಿದ್ದ ಮಂಜುನಾಥ ಶಿವಪುತ್ರಪ್ಪ ಕಿಳ್ಳಿಕ್ಯಾತರನನ್ನು ವಶಕ್ಕೆ ಪಡೆಯಲಾಗಿದೆ.
ಗುತ್ತಲದಲ್ಲಿ ಪ್ರಶಾಂತ ಆಲದಣ್ಣನವರ (40) ಅಕ್ರಮವಾಗಿ ಮದ್ಯ ಮಾರುತ್ತಿದ್ದ. ಈತನಿಂದ 7 ಲೀಟರ್ 500 ಮಿ.ಲಿ ವಿವಿಧ ಕಂಪನಿಯ ಟೆಟ್ರಾ ಪ್ಯಾಕ್, ಬಿಯರ್ ಟಿನ್ ಜಪ್ತಿ ಮಾಡಲಾಗಿದೆ. ಸವಣೂರ ನಾಯಿಕೆರೂರು ಗ್ರಾಮದ ಶಂಕರಗೌಡ ಉಮ್ಮನಗೌಡರ, ಬಸ್ ನಿಲ್ದಾಣ ಬಳಿಯ ತನ್ನ ಅಂಗಡಿ ಮುಂದೆ ಮದ್ಯ ಮಾರುತ್ತಿದ್ದ. ಈತನಿಂದ 3,763 ರೂ. ಮೊತ್ತದ 90 ಎಂ.ಎಲ್ ಓಲ್ಡ್ ಟವೇರಾ ವಿಸ್ಕಿ, 180 ಎಂ.ಎಲ್ ಅಸಿಸ್ ವಿಸ್ಕಿ 48 ಟೆಟ್ರಾ ಪ್ಯಾಕ್ ಜಪ್ತಿ ಮಾಡಲಾಗಿದೆ.
ರಾಣೆಬೆನ್ನೂರ ರಾಜರಾಜೇಶ್ವರಿ ನಗರದ 1ನೇ ಕ್ರಾಸ್‌ನ ಹಳೇ ಬಿಇಒ ಕಚೇರಿ ಬಳಿ ಆರೋಪಿ ಕರಬಸಪ್ಪ ನಾಗಪ್ಪ ಸರ್ವಂದ ಮದ್ಯ ಮಾರುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಸವಣೂರ ತಾಲೂಕು ಕಡಕೋಳು ಗ್ರಾಮದ ಬಸವನಕೊಪ್ಪ ರಸ್ತೆಯ ಕ್ರಾಸ್ ಬಳಿ ಆರೋಪಿ ಪರಮೇಶಪ್ಪ ಬಾರ್ಕಿ ಮದ್ಯ ಮಾರುತ್ತಿದ್ದ. ಈತನಿಂದ 4,572 ರೂ. ಮೌಲ್ಯದ 96 ಟೆಟ್ರಾ ಪ್ಯಾಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಗ್‌ರೈಸ್ ಅಂಗಡಿ ಬಳಿ ಮಾರಾಟ
ಹಲಗೇರಿ ರಾಕ್ ಸ್ಟಾರ್ ಡಾಬಾ ಮುಂದೆ ಆರೋಪಿ ಶಿವಕುಮಾರ ಪತ್ತೇರ ಹಾಗೂ ಫ್ರೆಂಡ್ಸ್ ಎಗ್ ರೈಸ್ ಅಂಗಡಿ ಮುಂದೆ ಮಾಲತೇಶ ಗುಬ್ಬೇರ ಮದ್ಯ ಮಾರುತ್ತಿದ್ದ. ಹಿರೆಕೆರೂರ ನೂಲಗೇರಿ ಗ್ರಾಮದ ಅಂಗಡಿ ಮುಂದೆ ಆರೋಪಿ ಬಸವರಾಜ ವೀರಬಸಪ್ಪ ಹುಲ್ಮನಿ ಮದ್ಯ ಮಾರುತ್ತಿದ್ದ. ಹಂಸಭಾವಿ ಯತ್ತಿನಹಳ್ಳಿ ಗ್ರಾಮದ ರೇಣುಕಾಂಬ ಢಾಬಾ ಎದುರು ಮದ್ಯ ಮಾರುತ್ತಿದ್ದ ವೇಳೆ ಭರಮಪ್ಪ ಭೀಮಪ್ಪ ಹಿರೇಕೆರೂರ ಎಂಬಾತನ ಮೇಲೆಯೂ ಪೊಲೀಸರು ಕೇಸ್ ಮಾಡಿದ್ದಾರೆ.