

ಹಾವೇರಿ: ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಲು ಮಾ.9ರಂದು ಬೆಳಗ್ಗೆ 6.30ಕ್ಕೆ ಎಸ್‌ಪಿ ಕಚೇರಿಯಿಂದ 10 ಕೆ ಹಾಗೂ 5 ಕೆ ಮ್ಯಾರಾಥಾನ್ ಓಟ ಆಯೋಜಿಸಲಾಗಿದೆ.
ಡ್ರಗ್ಸ್ ಮುಕ್ತ ಕರ್ನಾಟಕ, ಡ್ರಗ್ಸ್ ಮುಕ್ತ ಹಾವೇರಿ ಜಿಲ್ಲೆ ಮಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಏಕ ಕಾಲದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಮ್ಯಾರಥಾನ್ ಓಟದಲ್ಲಿ ಜಿಲ್ಲೆಯ ಸಂಘ- ಸಂಸ್ಥೆಗಳು, ಗಣ್ಯರು, ಸಾರ್ವಜನಿಕರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮನವಿ ಮಾಡಿದ್ದಾರೆ.
ವಿಜೇತರಿಗೆ ಪೊಲೀಸ್ ಮೆಡಲ್
ಮ್ಯಾರಾಥಾನ್‌ನಲ್ಲಿ ಭಾಗವಹಿಸುವ ಎಲ್ಲರಿಗೂ ಟಿಶರ್ಟ್, ಪ್ರಮಾಣ ಪತ್ರ ನೀಡಲಾಗುವುದು. ಪೊಲೀಸರು, ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೂರು ಗುಂಪುಗಳಿಗೆ ಪ್ರತ್ಯೇಕ ಟಿ ಶರ್ಟ್ ನೀಡಲಾಗುವುದು. ಮೊದಲ ಸ್ಥಾನ ಗಳಿಸಿದ ವಿಜೇತರಿಗೆ ಪೊಲೀಸ್ ಮೆಡಲ್ ಬಹುಮಾನ ನೀಡಲಾಗುವುದು ಎಂದು ಹೆಚ್ಚುವರಿ ಎಸ್‌ಪಿ ಎಲ್.ವೈ ಶಿರಕೋಳ ತಿಳಿಸಿದ್ದಾರೆ.
ರೂಟ್ ಮ್ಯಾಪ್
ಹಾವೇರಿ ನಗರದ ಎಸ್‌ಪಿ ಕಚೇರಿ ಆವರಣದಿಂದ ಬೆಳಗ್ಗೆ 6.30ಕ್ಕೆ ಆರಂಭವಾಗಲಿದೆ. ಹೊಸಮನಿ ಸಿದ್ದಪ್ಪ ವೃತ್ತ, ಗುತ್ತಲ ರಸ್ತೆ, ಹುಕ್ಕೇರಿ ಮಠ, ಜಿಲ್ಲಾ ಕ್ರೀಡಾಂಗಣ ರಸ್ತೆ, ಚನ್ನಮ್ಮ ವೃತ್ತ ಮಾರ್ಗವಾಗಿ ಎಸ್‌ಪಿ ಕಚೇರಿಯಲ್ಲಿ ಅಂತ್ಯವಾಗಲಿದೆ.