ಹೆದ್ದಾರಿ ವಾಹನಗಳ ಮಾರ್ಗ ಬದಲಾವಣೆ; ವಾಹನ ಸವಾರರೇ ಇತ್ತ ಗಮನಿಸಿ; ಪಂಚಮಸಾಲಿ ಸಮುದಾಯದ ಪ್ರತಿಭಟನೆ ಹಿನ್ನೆಲೆ ಎಸ್‌ಪಿ ಆದೇಶ

Highway NH4
Published on

ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಜ.12ರಂದು ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮೂಲಕ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮೋಟೆಬೆನ್ನೂರ ಬಳಿ ಅಯ್ಯಪ್ಪಸ್ವಾಮಿ ಗುಡಿ ಬಳಿ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಆದೇಶದಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ತೆರಳುವ ವಾಹನಗಳು ಹಾನಗಲ್ಲ ಬ್ರಿಡ್ಜ್‌ನಿಂದ ಹಾವೇರಿ, ಗುತ್ತಲ, ರಾಣೆಬೆನ್ನೂರ ಮಾರ್ಗವಾಗಿ ಸಂಚರಿಸಬೇಕು. ಬೆಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುವವರು ಹೂಲಿಹಳ್ಳಿ ಬ್ರಿಡ್ಜ್ ಬಳಿ ಎಡಕ್ಕೆ ತಿರುಗಿ ಕದರಮಂಡಲಗಿ, ಮಾಸಣಗಿ, ಕಮ್ಮೂರ ಕ್ರಾಸ್, ಕಾಗಿನೆಲೆ, ಹಾವೇರಿ ಬೈಪಾಸ್ ಮಾರ್ಗವಾಗಿ ಸಂಚರಿಸಬೇಕು. ಬಂಕಾಪುರ ಟೋಲ್‌ನಿಂದ ಚಳಗೇರಿ ಟೋಲ್‌ವರೆಗೆ ಭಾರಿ ಗಾತ್ರದ ವಾಹನಗಳನ್ನು ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಸಂಚರಿಸದಂತೆ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net