

ಹಾವೇರಿ: ಸ್ಮಾರ್ಟ್‌ಫೋನ್‌ಗೆ ಲಿಂಕ್, ಸಂದೇಶ ಕಳುಹಿಸಿ, ಡಿಜಿಟಲ್ ಅರೆಸ್ಟ್ ಮಾಡುವ ಮೂಲಕ ಅಮಾಯಕ ಜನರಿಗೆ ಲಕ್ಷ ಲಕ್ಷ ರೂ. ವಂಚಿಸುವ ಸೈಬರ್ ವಂಚಕರ ಕುರಿತು ಜಾಗೃತಿ ಮೂಡಿಸುವ ‘ಹುಷಾರಾಗಿರಿ ಸ್ವಾಮಿ ಅಲರ್ಟ್ ಆಗಿರಿ’ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಆನಂದ ದೊಡ್ಡಕುರುಬರ ಸಾಹಿತ್ಯ ಬರೆದು, ನಟಿಸಿ, ತಾವೇ ಹಾಡಿರುವ ‘ಹುಷಾರಾಗಿರಿ’ ಹಾಡು ಜನಮೆಚ್ಚುಗೆ ಪಡೆಯುತ್ತಿದೆ. ಬಿಡುಗಡೆಯಾಗಿ ಒಂದೇ ದಿನದಲ್ಲಿ ಸಾವಿರಾರು ಜನರಿಂದ ವೀಕ್ಷಣೆಗೆ ಒಳಗಾಗಿದೆ.
ಆನಂದ ಅವರು ಸುಮಾರು 25 ಸಾವಿರ ರೂ. ಖರ್ಚು ಮಾಡಿ ಸ್ವಂತ ಖರ್ಚಿನಲ್ಲಿ ಆಲ್ಬಂ ರಚಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಬೆಂಗಳೂರಿನ ಆರೇಂಜ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಿದ್ದು, ಕಾಂತರಾಜ ಮಂಡ್ಯ ಸಂಗೀತ ನೀಡಿದ್ದಾರೆ. ಸರವಣ ಜಿ. ನಿರ್ದೇಶಿಸಿದ್ದಾರೆ. ರಾಜೇಶ್ವರಿ ಆನಂದ ದೊಡ್ಡಕುರುಬರ ನಿರ್ಮಿಸಿದ್ದಾರೆ. ಅಕ್ಷಯ ಶ್ರೀನಿವಾಸ ಛಾಯಾಗ್ರಹಣ ಮಾಡಿದ್ದಾರೆ.
1930 ಅಥವಾ 112 ಗೆ ಕರೆ ಮಾಡಿ, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪರಿಚಿತರ ಲಿಂಕ್‌ಗಳನ್ನು ಒತ್ತಬೇಡಿ, ಒಟಿಪಿ ಯಾವುದೇ ಕಾರಣಕ್ಕೆ ಹಂಚಿಕೊಳ್ಳಬೇಡಿ, ಎಂಬಿತ್ಯಾದಿ ಅಂಶಗಳ ಕುರಿತು ಹಾಡಿನ ಮೂಲಕ ಬೆಳಕು ಚೆಲ್ಲಲಾಗಿದೆ.
ಸಾಹಿತ್ಯ ಕೃಷಿಗೂ ಸೈ
ಹಾನಗಲ್ಲ ತಾಲೂಕು ಹಿರೇಕಣಗಿ ಗ್ರಾಮದ ಆನಂದ ದೊಡ್ಡಕುರುಬರ ಬಿಎ ವ್ಯಾಸಂಗ ಮಾಡಿದ್ದು, 2011ರಲ್ಲಿ ಕಾನ್‌ಸ್ಟೆಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದಾರೆ. 2020ರಲ್ಲಿ ಮುಖ್ಯಮಂತ್ರಿ ಪದಕ ಪಡೆದಿದ್ದಾರೆ. ನಾಲ್ಕೂವರೆ ವರ್ಷದಿಂದ ಸೈಬರ್ ಕ್ರೈ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಕರೋನಾ ಹಾಗೂ ಸಂಚಾರ ನಿಯಮ ಪಾಲನೆ ಬಗ್ಗೆ ಜಾಗೃತಿ ಗೀತೆಗಳನ್ನು ರಚಿಸಿ, ಬಿಡುಗಡೆಗೊಳಿಸಿದ್ದರು. ಆನಂದ ಅವರು ಕಾವ್ಯ ಸ್ಪೂರ್ತಿ, ಬರಡಾದೀತೆನ್ನ ಮನ, ಅರಳುವ ಮೊಗ್ಗುಗಳು ಹಾಗೂ ಕಾಣಿಸದ ಕೈ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ.
ಎಸ್‌ಪಿ ಅಂಶುಕುಮಾರ ಅವರಿಂದ ಬಿಡುಗಡೆ
ಹಾವೇರಿ: ಹುಷಾರಾಗಿರಿ ಕನ್ನಡ ಸೈಬರ್ ಕ್ರೈಂ ಜಾಗೃತಿ ಗೀತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅಂಶುಕುಮಾರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಗುರುವಾರ ಬಿಡುಗಡೆಗೊಳಿಸಿದರು.
ದೂರದ ರಾಜ್ಯಗಳಲ್ಲಿ ಎಲ್ಲೋ ಕುಳಿತು ಲಕ್ಷಾಂತರ ರೂ. ವಂಚನೆ ಮಾಡುವ ಸೈಬರ್ ವಂಚಕರ ಕುರಿತು ಜಾಗೃತಿ ಮೂಡಿಸುವ ಗೀತೆ ರಚಿಸಿರುವ ಕಾನ್‌ಸ್ಟೆಬಲ್ ಆನಂದ ದೊಡ್ಡಕುರುಬರ ಕಾರ್ಯವನ್ನು ಶ್ಲಾಘಿಸಿದರು. ಈ ಜಾಗೃತಿ ಮೂಡಿಸುವ ಹಾಡನ್ನು ಹೆಚ್ಚು ಜನರಿಗೆ ತಲುಪಿಸುವಂತೆ ಸೂಚನೆ ನೀಡಿದರು.
ಸೈಬರ್ ಕ್ರೈಂ ಠಾಣೆಯ ಪೊಲೀಸ್ ಉಪಾಧೀಕ್ಷಕಿ ಪ್ರಗ್ಯಾ ಆನಂದ, ಇನ್‌ಸ್ಪೆಕ್ಟರ್ ಶಿವಶಂಕರ ಗಣಾಚಾರಿ, ಆನಂದ ದೊಡ್ಡಕುರುಬರ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಇತರರಿದ್ದರು.