ಹಾವೇರಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸೋಯಾಬಿನ್ ಹಾಗೂ ಶೇಂಗಾ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬಿನ್ ಉತ್ಪನ್ನ ಪ್ರತಿ ಕ್ವಿಂಟಾಲ್‌ಗೆ 5,328 ರೂ. ಹಾಗೂ ಪ್ರತಿ ಕ್ರಿಂಟಲ್ ಶೇಂಗಾ 7,263 ರೂ.ನಂತೆ ಖರೀದಿಸಬೇಕು. ಸರ್ಕಾರದ ಆದೇಶದ ದಿನಾಂಕದಿಂದ 80 ದಿನಗಳವರೆಗೆ ಹಾಗೂ ನೋಂದಣಿ ಕಾರ್ಯಜತೆಯಲ್ಲಿ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗಧಿಪಡಿಸಿ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಸಂಸ್ಥೆ ಹಾಗೂ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳದ ಮೂಲಕ ಖರೀದಿಸಲು ಆದೇಶಿಸಲಾಗಿದೆ ಎಂದರು.
ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಸೋಯಾಬಿನ್ ಹಾಗೂ ಶೇಂಗಾ ಉತ್ಪನದ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡಬೇಕು. ಈ ಕುರಿತು ವ್ಯಾಪಕ ಪ್ರಚಾರ ನಡೆಸಿ, ಕರಪತ್ರ, ಬ್ಯಾನರ್ ಅಳಡಿಸುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು. ರೈತರಿಂದ ಖರೀದಿಸಿದ ಭತ್ತ ಉತ್ಪನ್ನ ದಾಸ್ತಾನು ಮಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಉಗ್ರಾಣಗಳನ್ನು ಕಾಯ್ದಿರಿಸಬೇಕು ಎಂದು ಸೂಚಿಸಿದರು.
ಎಫ್‌ಎಕ್ಯೂ ಗುಣಮಟ್ಟ: ಸೋಯಾಬಿನ್ ಹಾಗೂ ಶೇಂಗಾ ಎಫ್.ಎ.ಕ್ಯೂ ಗುಣಮಟ್ಟ ಗುರುತಿಸಲು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿಯನ್ನು ಖರೀದಿ ಕೇಂದ್ರಕ್ಕೆ ನಿಯೋಜಿಸಬೇಕು. ಪ್ರತಿ ರೈತರಿಂದ ಪ್ರತಿ ಎಕರೆಗೆ ಐದು ಕ್ವಿಂಟಲ್‌ನಂತೆ ಗರಿಷ್ಠ 20 ಕ್ವಿಂಟಲ್ ಸೋಯಾಬಿನ್ ಖರೀದಿಸಲು ಹಾಗೂ ಪ್ರತಿ ರೈತರಿಂದ ಪ್ರತಿ ಎಕರೆಗೆ ಮೂರು ಕ್ವಿಂಟಲ್‌ನಂತೆ ಗರಿಷ್ಠ 15 ಕ್ವಿಂಟಲ್ ಶೇಂಗಾ ಖರೀದಿಸಲು ಅವಕಾಶವಿದೆ.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು, ಸಹಕಾರಿ ಸಂಘಗಳ ಉಪನಿಬಂಧಕರು, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು, ಇತರರು ಉಪಸ್ಥಿತರಿದ್ದರು.
ಸೋಯಾಬಿನ್ ಖರೀದಿ ಕೇಂದ್ರ:
ಬೆಂಬಲ ಬೆಲೆ ಯೋಜನೆಯಡಿ ಸೋಯಾಬಿನ್ ಉತ್ಪನ್ನ ಖರೀದಿ ಕೇಂದ್ರಗಳನ್ನು ಹಾವೇರಿ, ಬಂಕಾಪುರ, ಹಾನಗಲ್ಲ, ರಾಣೆಬೆನ್ನೂರ, ಸವಣೂರ, ರಟ್ಟಿಹಳ್ಳಿ ಟಿ.ಎಪಿ.ಸಿ.ಎಂ.ಎಸ್‌ನಲ್ಲಿ ಹಾಗೂ ಶಿಗ್ಗಾಂವಿಯ ಮಹಾನಂದಿ ಗ್ರೀನ್ ರೈತರ ಉತ್ಪಾದಕ ಕಂಪನಿಯಲ್ಲಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಶೇಂಗಾ ಖರೀದಿ ಕೇಂದ್ರ:
ರಾಣೆಬೆನ್ನೂರ, ಸವಣೂರ ಟಿ.ಎಪಿ.ಸಿ.ಎಂ.ಎಸ್‌ನಲ್ಲಿ ಹಾಗೂ ಶಿಗ್ಗಾಂವಿ ಮಹಾನಂದಿ ಗ್ರೀನ್ ರೈತರ ಉತ್ಪಾದಕ ಕಂಪನಿ ಮತ್ತು ಹುಲಗೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶೇಂಗಾ ಉತ್ಪನ್ನ ಖರೀದಿ ಕೇಂದ್ರಗಳನ್ನು ಆರಂಭಿಸಲು ಡಿಸಿ ಸೂಚಿಸಿದರು.
ಬಿತ್ತನೆ ಪ್ರದೇಶ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 14,687 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆಯಾಗಿದೆ. ಹಾವೇರಿ ತಾಲೂಕಿನಲ್ಲಿ 3,584 ಹೆ., ಶಿಗ್ಗಾಂವಿ-4,454 ಹೆ., ಹಾನಗಲ್ಲ-2,175 ಹೆ., ರಾಣೆಬೆನ್ನೂರ-2,215 ಹೆ., ಸವಣೂರ-1,361 ಹೆ., ಬ್ಯಾಡಗಿ-636 ಹೆ., ಹಿರೇಕೆರೂರ-ರಟ್ಟಿಹಳ್ಳಿ ತಾಲೂಕಿನಲ್ಲಿ 262 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿ 4,976 ಹೆ.ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದ್ದು, ಹಾವೇರಿ ತಾಲೂಕಿನಲ್ಲಿ 519 ಹೆ., ಶಿಗ್ಗಾಂವಿ-941 ಹೆ., ಹಾನಗಲ್ಲ-268 ಹೆ., ರಾಣೆಬೆನ್ನೂರ-469 ಹೆ., ಸವಣೂರ-2,063 ಹೆ., ಬ್ಯಾಡಗಿ-616 ಹೆ., ಹಿರೇಕೆರೂರ-ರಟ್ಟಿಹಳ್ಳಿ ತಾಲೂಕಿನಲ್ಲಿ 100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತೆನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.