ಸೌಹಾರ್ದತೆ ಮನುಷ್ಯರ ಉಸಿರಾಗಬೇಕಿದೆ; ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿಕೆ

31 HVR 2
Published on

ಹಾವೇರಿ: ಭಾರತವು ಸೌಹಾರ್ದ ಹಾಗೂ ಸದ್ಭಾವದ ದೇಶವೆಂದು ಜಗತ್ತು ಕೊಂಡಾಡುತ್ತದೆ. ಭಾವೈಕ್ಯತೆಯೇ ನಮ್ಮ ಭಾರತದ ಅಂತಸತ್ವವಾಗಿದೆ. ಈ ಭಾವೈಕ್ಯತೆ, ಸಾಮರಸ್ಯವನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ಸೌಹಾರ್ದ ಕರ್ನಾಟಕ ಹಾವೇರಿ ನೇತೃತ್ವದಲ್ಲಿ ಆಯೋಜಿಸಿದ್ದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾಮರಸ್ಯ ಪರಂಪರೆಯು ಚಿರಸ್ಥಾಯಿಯಾಗಿ ಉಳಿಯಬೇಕು. ಹಲವಾರು ನಿಂದನೆ, ಅವಮಾನ ಎದುರಿಸಿದರೂ ಅನಿಷ್ಠ ಅಸ್ಪಶ್ಯತೆಯನ್ನು ತೊಲಗಿಸಲು ದಿಟ್ಟ ಹೆಜ್ಜೆ ಇಟ್ಟ ಗಾಂಧೀಜಿಯವರು ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡಿದರು ಎಂದು ಸ್ಮರಿಸಿದರು.
ಗಾಂಧೀ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೂ ಭಾವೈಕ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸೋಣ; ಸೌಹಾರ್ದ ಭಾರತ ಕಟ್ಟೋಣ ಎಂಬ ಘೋಷಣೆಗಳು ಕೇಳಿ ಬಂದವು. ನಂತರ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೌಹಾರ್ದ ಮಾನವ ಸರಪಳಿ ರಚಿಸಲಾಯಿತು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಹಸೀನಾ ಹೆಡಿಯಾಲ, ಪರಿಮಳ ಜೈನ್, ಬಸವರಾಜ ಹಾದಿಮನಿ ಮಾತನಾಡಿದರು.
ಶ್ರೀ ಗುರುಪಾದಯ್ಯ ದೇವರು, ಸೇಂಟ್ ಆ್ಯನ್ಸ್ ಚರ್ಚ್ ಪಾದ್ರಿ ಜೋಸೆಫ್ ಆಲಯ, ಮೌಲ್ವಿಗಳಾದ ದಾದಾಪೀರ್ ಮುಲ್ಲಾ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಜಿಲ್ಲಾ ಸಂಚಾಲಕ ನಾರಾಯಣ ಕಾಳೆ, ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್., ರಾಜ್ಯ ರೈತ ಸಂಘದ ಪ್ರಮುಖರಾದ ಶಿವಬಸಪ್ಪ ಗೋವಿ, ಅಲೆಮಾರಿ ಸಂಘಟನೆಯ ಶೆಟ್ಟಿ ವಿಭೂತಿ, ಅಶೋಕ ಮರೆಣ್ಣನವರ, ನಿಂಗಪ್ಪ ಗಾಳೆಮ್ಮನವರ, ಎಂ.ಕೆ.ಮಕಬುಲ್, ಜಿಲಾನಿ ಪಟವೇಗಾರ, ರಮೇಶ ಜಾಲಿಹಾಳ, ಶೋಭಾ ಮುದೇನೂರು, ಪೃಥ್ವಿರಾಜ ಬೆಟಗೇರಿ, ಶಂಕರ ತುಮ್ಮಣ್ಣವರ, ಈರಣ್ಣ ಬೆಳವಡಿ, ಎಸ್.ಎಫ್.ಸುತಾರ, ರೇಣುಕಾ ಗುಡಿಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net