ಅಡಕೆ ತೋಟದಲ್ಲಿ ಕಾಣಿಸಿಕೊಂಡಿದ್ದ ಎರಡು ಹೆಬ್ಬಾವು ರಕ್ಷಿಸಿದ ಸ್ನೇಕ್ ರಮೇಶ; 14 ಅಡಿ ಉದ್ದ, 25 ಕೆಜಿ ತೂಕ

13 HVR 3 B
Published on

ಹಾವೇರಿ: ಹಾನಗಲ್ಲ ತಾಲೂಕು ಚಿಕ್ಕಾಂಶಿ- ಹೊಸೂರ ಬಳಿಯ ಕ್ಯಾಸನೂರ ಗ್ರಾಮದ ಅಡಕೆ ತೋಟದಲ್ಲಿ ಶನಿವಾರ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಎರಡು ಹೆಬ್ಬಾವುಗಳನ್ನು ಸ್ನೇಕ್ ರಮೇಶ ರಕ್ಷಿಸಿದ್ದಾರೆ.

ಅಡಕೆ ತೋಟದಲ್ಲಿ ಎರಡು ಹೆಬ್ಬಾವು ಓಡಾಡುತ್ತಿದ್ದನ್ನು ನೋಡಿದ ತೋಟದ ಮಾಲೀಕರು ಪೊಲೀಸ್ ಇಲಾಖೆಯ ಉರಗ ತಜ್ಞ ಸ್ನೇಕ್ ರಮೇಶ ಅವರಿಗೆ ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ರಮೇಶ ತನ್ನ ಸಹೋದರ ಗೃಹರಕ್ಷಕ ದಳ ಸಿಬ್ಬಂದಿ ಸ್ನೇಕ್ ಶ್ರೀಕಾಂತ ಮರಿಯಣ್ಣನವರ ಸಹಾಯದಿಂದ ಕಾರ್ಯಾಚರಣೆ ಮಾಡಿ ಎರಡು ಹೆಬ್ಬಾವುಗಳನ್ನು ಸೆರೆ ಹಿಡಿದಿದ್ದಾರೆ.

13 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದಿರುವ ರಮೇಶ ಅವರು ಮೊದಲ ಬಾರಿಗೆ ಹೆಬ್ಬಾವುಗಳನ್ನು ಹಿಡಿದಿದ್ದಾರೆ. ಇದೊಂದು ವಿಶಿಷ್ಟ ಕಾರ್ಯಾಚರಣೆ ಆಗಿತ್ತು ಎನ್ನುತ್ತಾರೆ ಸ್ನೇಕ್ ರಮೇಶ.

14 ಅಡಿ ಉದ್ದ, 25 ಕೆಜಿ ತೂಕ

ಒಂದು ಹೆಬ್ಬಾವು 14 ಅಡಿ ಉದ್ದ, 25 ಕೆಜಿ ತೂಕ ಇತ್ತು. ಮತ್ತೊಂದು 10 ಅಡಿ ಉದ್ದ 14 ಕೆಜಿ ತೂಕ ಹೊಂದಿತ್ತು. ಹೆಬ್ಬಾವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆ. ವಲಯ ಅರಣ್ಯಾಧಿಕಾರಿ ಸಿದ್ದಮ್ಮ ಕರಿಗಾರ, ಉಪ ಅರಣ್ಯಾಧಿಕಾರಿ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಎರಡು ಹೆಬ್ಬಾವುಗಳನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದೇವೆ ಎಂದು ಸ್ನೇಕ್ ರಮೇಶ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net