ಸರ್ಕಾರಿ ಸವಲತ್ತು ಪಡೆದು ಉದ್ಯಮಿಗಳಾಗಿ; ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ರೇಷ್ಮಾ ಕೌಸರ್ ಸಲಹೆ

8 HVR 4
Published on

ಹಾವೇರಿ: ಸರ್ಕಾರದಿಂದ ವಿವಿಧ ಯೋಜನೆಗಳಡಿ ದೊರೆಯುವ ಸಾಲ ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು. ಉದ್ಯಮಿಗಳಾಗಿ, ಇತರರಿಗೆ ಉದ್ಯೋಗ ಕೊಡುವಂತವರಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಹೇಳಿದರು.
ನಗರದ ಪ್ರಧಾನಮಂತ್ರಿ ಕೌಶಲ ಕೇಂದ್ರದಲ್ಲಿ ಗುರುವಾರ ಸಮಾಜ ಕಲ್ಯಾಣ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಬೆಂಗಳೂರು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಧಾರವಾಡ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವ ಜನರಿಗೆ ಆಯೋಜಿಸಿದ್ದ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ವಿಶೇಷವಾಗಿ ಮಹಳೆಯರಿಗೆ ಸ್ವಉದ್ಯೋಗ ಮಾಡಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಂತಹ ತರಬೇತಿ ಕಾರ್ಯಕ್ರಮಳ ಸದುಪಯೋಗ ಪಡೆದುಕೊಂಡು ಸ್ವಉದ್ಯೋಗ ಮಾಡಬೇಕು, ಅಂದಾಗ ಮಾತ್ರ ನೀರುದ್ಯೋಗ ಸಮಸ್ಯೆ ಹೋಗಲಾಡಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಸಂಜಯ ಕೋರೆ ಮಾತನಾಡಿ, ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಸಮಗ್ರ ಮಾಹಿತಿ ಪಡೆಯಬೇಕು. ಸರ್ಕಾರದ ಸಾಲ ಸೌಲಭ್ಯ ಪಡೆದುಕೊಂಡು ಉದ್ಯಮಿಗಳಾಗುವ ಜತೆಗೆ ಉದ್ಯೋಗದಾತರಾಗಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಮುಕುಂದಪ್ಪ ಬಿ. ಮಾತನಾಡಿ, ಉದ್ಯಮಶೀಲರ ಗುಣಲಕ್ಷಣಗಳು ಹೇಗಿರಬೇಕು, ಉದ್ಯಮವನ್ನು ಯಾವ ರೀತಿಯಲ್ಲಿ ಪ್ರಾರಂಭಿಸಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಕೌಶಲ ಕೇಂದ್ರದ ಮುಖ್ಯಸ್ಥ ಸಿದ್ದು ಹಿರೇಮಠ, ಇತರರು ಉಪಸ್ಥಿತರಿದ್ದರು. ಶಿವಾನಂದ ತಳವಾರ ನಿರೂಪಿಸಿದರು. ಶಿವರುದ್ರಪ್ಪ ಸ್ವಾಗತಿಸಿದರು. ಜಗದೀಶ ಇಂಗಳಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net