

ಹಾವೇರಿ: ಶರಣರು ಜೀವನದಲ್ಲಿ ತಾವು ಕಂಡುಕೊಂಡ ಸತ್ಯದರ್ಶನವನ್ನು ಅಂತರಂಗದಲ್ಲಿ ಅಳವಡಿಸಿಕೊಂಡರು. ಅವರ ಜೀವನದಂತೆ ನಮ್ಮ ಜೀವನ ಸತ್ಯದ ರೂಪವಾಗಬೇಕಾದರೆ ನಮ್ಮ ನಡೆ ನುಡಿಗಳು ಒಂದೇ ಆಗಿರಬೇಕು ಎಂದು ಕಡೆನಂದಿಹಳ್ಳಿಯ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಸಿಂಧಗಿ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಲಿಂಗೈಕ್ಯ ಶಾಂತವೀರ ಪಟ್ಟಾಧ್ಯಕ್ಷರ 45ನೇ ಪುಣ್ಯ ಸ್ಮರಣೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ. ಈ ದೇಹ ಇರುವವರೆಗೆ ಪ್ರತಿಕ್ಷಣ ಸಂತೋಷವಾಗಿ ಜೀವನ ಸಾಗಿಸಬೇಕು. ವಿಜಯನಗರ ಸಾಮ್ರಾಜ್ಯದ ಮುತ್ತು-ರತ್ನ, ವೈಭವ ಇಂದಿಲ್ಲ. ಸಾಮ್ರಾಜ್ಯ ನಾಶವಾಗಿ, ರಾಜ್ಯ ಕಟ್ಟಿದವರೂ ಇಲ್ಲ. ಈಗ ಬರೀ ಹಾಳು ಹಂಪಿ. ನಮ್ಮ ಬದುಕಿನ ಈ ಸಾಮ್ರಾಜ್ಯ ಕೂಡ ಮುಂದೆ ಹಂಪಿಯಂತೆ ಮೂಲೆಗುಂಪಾಗುವುದು ಸಹಜ. ಸರಿದು ಹೋಗುವುದು ಸಂಸಾರ. ನಾವೆಲ್ಲರೂ ಒಗ್ಗೂಡಿ ಬಾಳಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಸೌಹಾರ್ಧವೇ ಮಾನವ ಧರ್ಮ, ಅಸಹನೆಯೇ ಅಧರ್ಮ ಎನ್ನುವುದನ್ನು ಅರಿತು ಬಾಳಿದರೆ ಶರಣರ ಆಶೀರ್ವಾದ ದೊರೆಯುತ್ತದೆ ಎಂದರು.
ಶರಣರ ಜೀವನ ದರ್ಶನ ಪ್ರವಚನ ನೀಡಲು ಆಗಮಿಸಿದ ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಪ್ರಭು ಸ್ವಾಮೀಜಿ ತಮ್ಮ ಪ್ರವಚನ ಮಾಡುತ್ತ ಶಿವಶರಣರು 12ನೇ ಶತಮಾನದಲ್ಲಿ ಹಾಕಿಕೊಟ್ಟ ಸತ್ಯ, ಶುದ್ಧ, ಕಾಯಕ, ನಿಷ್ಠೆಗಳ ಸನ್ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತವಾಗುವುದು. ದೇವರು ಬೆಳಕಿನ ಸ್ವರೂಪದಲ್ಲಿ ಸರ್ವವ್ಯಾಪಿಯಾಗಿದ್ದಾನೆ. ದಾನ, ಧರ್ಮ, ನ್ಯಾಯ, ನೀತಿ, ಪ್ರಾಮಾಣಿಕತೆಯಿಂದ ಪ್ರಾರ್ಥಿಸುವ ಶಿವಭಕ್ತರ ಹದಯದಲ್ಲಿ ದೇವರು ನೆಲೆಸಿದ್ದಾನೆ. ಅಂದು ಸಮಾಜದಲ್ಲಿನ ಹಿಂದುಳಿದ, ಶೋಷಿತರ, ಸ್ತ್ರೀಯರ ಸಮಾನತೆಗೆ ಹೋರಾಡಿದ ಬಸವಣ್ಣನವರು ವಚನ ಸಾಹಿತ್ಯ ಇಂದು ಜಗತ್ತಿಗೆ ದಾರಿದೀಪವಾಗಿದೆ ಎಂದರು.
ಹರ್ಲಾಪುರದ ಎಸ್.ಎಸ್ ಹಿರೇಮಠ ನೇತೃತ್ವದ ಸಿವೈಸಿಡಿ ಕಲಾ ತಂಡದ ಕಲಾವಿದರಿಂದ ಜಾನಪದ ಕಲಾಪ್ರದರ್ಶನ ಜರುಗಿತು.
ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸಿದ್ದರು.
ಸಿಂದಗಿ ಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ, ಜಿ.ಎಸ್ ಭಟ್, ವಾಗೀಶ ಶಾಸ್ತ್ರಿಗಳು, ಶಿವಯೋಗಯ್ಯ ಹಿರೇಮಠ, ವೀರಣ್ಣ ಮಹಾರಾಜಪೇಟ, ಮಹಾಂತೇಶ ಲಂಬಿ, ರಾಜಣ್ಣ ಬೆಲ್ಲದ, ಬಸವರಾಜ ಮುಳುಗುಂದ, ಉಮೇಶ ಪಾಟೀಲ, ಚನ್ನಬಸಯ್ಯ ಹಿರೇಮಠ, ರಾಜೇಂದ್ರ ರಿತ್ತಿ, ಮತ್ತಿತರರು ಪಾಲ್ಗೊಂಡಿದ್ದರು.