

ಹಾವೇರಿ: ಕನ್ನಡ ನಾಡು ಕಂಡ ಅಪೂರ್ವ ತ್ಯಾಗಯೋಗಿಗಳು ಕನ್ನಡ ನಾಡಿನ ಸಮಸ್ತ ಭಕ್ತ ಸಂಕುಲಕ್ಕೆ ಸುವಿಚಾರ ಮಾರ್ಗಿಗಳಾಗಿದ್ದವರು ಸಿಂದಗಿಮಠದ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಸಿಂದಗಿ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಶಾಂತವೀರ ಪಟ್ಟಾಧ್ಯಕ್ಷರ 44ನೇ ಪುಣ್ಯ ಸ್ಮರಣೋತ್ಸವದ ಉದ್ಘಾಟಿಸಿ ಅವರು ಮಾತನಾಡಿದರು. ಅನಾಚಾರಿಗಳಿಗೆ ಆಚಾರವನ್ನು, ದುರಾಚಾರಿಗಳಿಗೆ ಧರ್ಮ ಮಾರ್ಗವನ್ನು ಆಗಮಿಕರಿಗೆ ವೈಜ್ಞಾನಿಕ ತಳಹದಿಯ ವೈದಿಕ ನೆಲೆಯನ್ನು, ಭವಿಗಳಿಗೆ ಭಕ್ತಿ ಮಾರ್ಗವನ್ನು, ಅಂಗಕ್ಕೆ ಲಿಂಗವನ್ನು ಸಾಮಾನ್ಯ ಶಿಲೆಗೆ ದೈವತ್ವದ ಪ್ರಾಣ ಪ್ರತಿಷ್ಠೆಯನ್ನು ಮಾಡಿ ನಾಡಿನ ಲಿಂಗಾಯತ ಸಮಾಜಕ್ಕೆ ದೈವಿಕ ಕಳೆ ಸರ್ವರ ಮುಖ ಕಮಲದಲ್ಲಿ ಅರಳುವಂತೆ ಮಾಡಿದ ಸುವಿಚಾರ ಸದ್ಗುರು ಶಾಂತವೀರ ಶಿವಾಚಾರ್ಯರಾಗಿದ್ದಾರೆ. ಮಕ್ಕಳಿಗೆ ಅನ್ನ, ಅರಿವು ಮತ್ತು ಆಶ್ರಯ ನೀಡಿದ ತ್ರಿವಿಧ ದಾಸೋಹಿಗಳಾಗಿದ್ದರು. ಪೂಜ್ಯರ ಬದುಕಿನ ದಾರಿ ಮುಂದಿನ ಜನಾಂಗಕ್ಕೆ ಹೆದ್ದಾರಿಯಾಗಲಿದೆ ಎಂದರು.
ತಾರಿಹಾಳ ಅಡವಿ ಸಿದ್ದೇಶ್ವರ ಮಠದ ಅಡವೀಶ್ವರ ದೇವರು ಮಹಾತ್ಮರ ಜೀವನ ದರ್ಶನ ಕುರಿತು ಪ್ರವಚನ ಮಾಡಿದರು.
ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಸಿಂದಗಿ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಹೋತನಹಳ್ಳಿಯ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು, ಇತರರು ಉಪಸ್ಥಿತರಿದ್ದರು.
ಮಠದ ಸಂಸ್ಕೃತ ಉಪನ್ಯಾಸಕ ಗೋಪಾಲಕೃಷ್ಣ ಭಟ್ ನಿರೂಪಿಸಿದರು.