

ಹಾವೇರಿ: ಶ್ರೀ ಶಿವಲಿಂಗೇಶ್ವರ ಕಂಪ್ಯೂಟರ್ಸ್‌ನ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಶೀಘ್ರದಲ್ಲೇ ಉಚಿತವಾಗಿ ನೀಟ್, ಸಿಇಟಿ ಹಾಗೂ ಉದ್ಯೋಗಾಧಾರಿತ ಕೋರ್ಸ್‌ಗಳಿಗೆ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಸಿಇಒ ಸುರೇಶ ಮುರಡಣ್ಣವರ ತಿಳಿಸಿದರು.
ನಗರದ ಗುರು ಭವನ ರಸ್ತೆಯ ಸಂಸ್ಥೆಯ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆ 25 ವರ್ಷಗಳಿಂದ ಹಂತ ಹಂತವಾಗಿ ಬೆಳೆದು ಬಂದಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ನೀಡಿದೆ. ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ನೀಟ್ ಮತ್ತು ಸಿಇಟಿ ತರಬೇತಿಯನ್ನು ಸೆಪ್ಟೆಂಬರ್‌ನಿಂದ ಫೆಬ್ರವರಿವರೆಗೆ ಉಚಿತವಾಗಿ ನಡೆಸಲಾಗುವುದು. ಇದಕ್ಕಾಗಿ ಜಿಲ್ಲೆಯ 25 ಬಡ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು ಎಂದರು.
250 ರೈತರು, ಪೌರ ಕಾರ್ಮಿಕರ ಮಕ್ಕಳು, ಸೈನಿಕರ ಕುಟುಂಬದವರು, ವಿಧವೆಯರು, ವಿಶೇಷ ಚೇತನರಿಗೆ ಉಚಿತವಾಗಿ ಬೇಸಿಕ್, ಡಿಟಿಪಿ, ಟ್ಯಾಲಿ, ಸ್ಪೋಕನ್ ಇಂಗ್ಲಿಷ್ ಹಾಗೂ ಇತರ ಉದ್ಯೋಧಾರಿತ ಕೋರ್ಸ್‌ಗಳನ್ನು ನಡೆಸಲಾಗುವುದು. ಇನ್ನೂ ಅನೇಕ ಸೇವೆಗಳನ್ನು ನೀಡಲು ಯೋಜಿಸಲಾಗಿದೆ ಎಂದರು.