ಶಿವಬಸವ ನಗರದಲ್ಲಿ ಚರಂಡಿ ಇಲ್ಲದ ಗಬ್ಬು ವಾಸನೆ; ಮಟನ್ ಮಾರುಕಟ್ಟೆಯಿಂದ ಹರಿಯುತ್ತೆ ಕೊಳಚೆ ನೀರು

28 HVR 2 A
Published on

ಹಾವೇರಿ: ಇಲ್ಲಿನ ಶಿವಬಸವನಗರದ ಮೂರನೇ ಕ್ರಾಸ್ ಗಣೇಶ ದೇವಸ್ಥಾನದ ಹಿಂಭಾಗದಲ್ಲಿ ಚರಂಡಿ ಸಂಪೂರ್ಣವಾಗಿ ಹಾಳಾಗಿದ್ದು, ಮಟನ್ ಮಾರುಕಟ್ಟೆಯಿಂದ ಹರಿದು ಬರುವ ಕೊಳಚೆ ನೀರಿನಿಂದ ಗಬ್ಬು ವಾಸನೆ ಸೃಷ್ಟಿಯಾಗುತ್ತಿದೆ. ಇದರಿಂದ ಇಲ್ಲಿನ ಜನ ಮೂಗು ಮುಚ್ಚಿಕೊಂಡೇ ವಾಸಿಸುವಂತಾಗಿದೆ.

3ನೇ ಕ್ರಾಸ್‌ನ ಭಂಗೀ ರಸ್ತೆಯಲ್ಲಿ ಕೆಲ ವರ್ಷಗಳ ಹಿಂದೆ ನಗರಸಭೆಯವರು ಅರ್ಧ ರಸ್ತೆಗೆ ಕಾಂಕ್ರೀಟ್ ಹಾಕಿ ಇನ್ನರ್ಧ ರಸ್ತೆಯನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ಜತೆಗೆ ಇಲ್ಲಿರುವ ಚರಂಡಿ ಸಂಪೂರ್ಣವಾಗಿ ಹಾಳಾಗಿದ್ದು, ದುರಸ್ತಿಪಡಿಸದ ಕಾರಣ ಅವ್ಯವಸ್ಥೆಯ ಆಗರವಾಗಿದೆ.

ಮಟನ್ ಮಾರ್ಕೆಟ್‌ನಿಂದ 24/7 ಪ್ರಾಣಿಗಳ ಚರ್ಮ, ರಕ್ತ, ಕೊಳಚೆ ನೀರು ಹರಿದು ಬರುತ್ತದೆ. ಶಿವಬಸವನಗರದ 3ನೇ ಕ್ರಾಸ್‌ನಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಇಲ್ಲಿ ಕೊಳಚೆ ನೀರು ಶೇಖರಣೆಯಾಗುತ್ತದೆ. ಮಳೆ ಬಂದಾಗ ರಸ್ತೆ ತುಂಬ ಹರಿದು ಅವಾಂತರ ಸೃಷ್ಟಿಸುತ್ತದೆ. ಬೇಸಿಗೆಯಲ್ಲಂತೂ ತಿಂಗಳುಗಟ್ಟಲೆ ಕೊಳಚೆ ನೀರು ನಿಂತು ಸೊಳ್ಳೆ, ಕ್ರಿಮಿ ಕೀಟಗಳ ಉತ್ಪತ್ತಿ ತಾಣವಾಗಿ ಮಾರ್ಪಡುತ್ತದೆ. ಇದರಿಂದ ಇಲ್ಲಿನ ಜನ ಹಲವು ಬಾರಿ ಕಾಯಿಲೆಗೆ ತುತ್ತಾಗಿದ್ದು, ಸಾಂಕ್ರಾಮಿಕ ರೋಗಭೀತಿ ಆವರಿಸಿದೆ.

ಹಲವು ಬಾರಿ ಮನವಿ

ಈ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಯವರು, ಹಾವೇರಿ ನಗರಸಭೆ ಪೌರಾಯುಕ್ತರು, ಸ್ಥಳೀಯ ಪಾಲಿಕೆ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಯಾರೂ ಈ ಬಗ್ಗೆ ಸ್ಪಂದನೆ ನೀಡಿಲ್ಲ. ಇನ್ನಾದರೂ ಸಂಬಂಧಪಟ್ಟಿ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಮಸ್ಯೆ ಕುರಿತು ಗಮನಹರಿಸಬೇಕು. ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಕೋಟ್:

ಭಂಗೀ ರಸ್ತೆ ಅರ್ಧ ಮಾಡಿ ಕೈಬಿಟ್ಟಿದ್ದು, ಚರಂಡಿ ಅಂತೂ ಸಂಪೂರ್ಣ ಹಾಳಾಗಿದೆ. ಸ್ಥಳೀಯರಿಗೆ ರೋಗಭೀತಿ ಆವರಿಸಿದೆ. ಇನ್ನಾದರೂ ನಗರಸಭೆಯವರು ಈ ಬಗ್ಗೆ ಗಮನಹರಿಸುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಬೇಕು.

- ಗುರುಬಸಯ್ಯ ಕಂದಲ್ಲಮಠ, ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net