ರಂಗೇರಿದ ಶಿವ ಸಹಕಾರ ಸಂಘದ ಚುನಾವಣಾ ಕಣ

Published on

ಹಾವೇರಿ: ಇಲ್ಲಿನ ಅಶ್ವಿನಿ ನಗರದ ಶಿವ ಪತ್ತಿನ ಸಹಕಾರ ನಿಯಮಿತ ಸಂಘದ ಚುನಾವಣಾ ಕಣ ರಂಗೇರಿದ್ದು, ಆಡಳಿತ ಮಂಡಳಿಯ 15 ಸ್ಥಾನಗಳಿಗೆ 37 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಕಳೆದ 20 ವರ್ಷಗಳಿಂದ ಪದಾಧಿಕಾರಿಗಳ ಅವಿರೋಧ ಆಯ್ಕೆಯಾಗುತ್ತಿತ್ತು. 20 ವರ್ಷಗಳ ಬಳಿಕ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ. ಸಂಘದಲ್ಲಿ ಒಟ್ಟು 871 ಅರ್ಹ ಮತದಾರರಿದ್ದಾರೆ. ಆಡಳಿತ ಮಂಡಳಿಗೆ ಸಾಮಾನ್ಯ- 9, ಎಸ್‌ಸಿ-1, ಎಸ್‌ಟಿ-1, ಮಹಿಳಾ- 2, ಸೇರಿದಂತೆ 15 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಜು.6ರಂದು ನಾಮಪತ್ರ ಸಲ್ಲಿಕೆಯಾಗಿವೆ. ಭಾನುವಾರ ನಾಮಪತ್ರ ಪರಿಶೀಲನೆ ನಡೆಸಲಾಗಿದ್ದು, 37 ಅಭ್ಯರ್ಥಿಗಳ ನಾಮಪತ್ರ ಸ್ವೀಕಾರಗೊಂಡಿವೆ. ನಾಮಪತ್ರ ವಾಪಸ್ ಪಡೆಯಲು ಜು.8ರಂದು ಅವಕಾಶವಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಚಿಹ್ನೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಜು.10ರಂದು ಸಂಘದ ಕಚೇರಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಜು.14ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಗರದ ಮೈಲಾರ ಮಹದೇವ ವೃತ್ತದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ ಎರಡರಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ (ಆರ್‌ಒ) ಎಸ್.ಜಿ.ಸುಣಗಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net