

ಹಾವೇರಿ: ಸಂತ ಶಿಶುನಾಳ ಷರೀಫರು ಹಾಗೂ ಗುರು ಗೋವಿಂದಭಟ್ಟರ ಶಾಶ್ವತ ಚಿತ್ರಾತ್ಮಕ ರದ್ಧತಿ ಮುದ್ರೆಯಿಂದ ನಾಡಿನ ಹೆಮ್ಮೆಯ ಭಾವೈಕ್ಯತೆಯ ಹರಿಕಾರರ ಇತಿಹಾಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಕ್ಕೆ ಸಹಾಯವಾಗುತ್ತದೆ ಎಂದು ಅಂಚೆ ಅಧೀಕ್ಷಕ ಬಿ.ನಾರಾಯಣ ಹೇಳಿದರು.
ಶಿಗ್ಗಾಂವಿ ತಾಲೂಕು ಶಿಶುವಿನಹಾಳದ ಷರೀಫಗಿರಿಯಲ್ಲಿ ಇತ್ತೀಚೆಗೆ ಭಾರತೀಯ ಅಂಚೆ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಸಂತ ಶಿಶುನಾಳ ಷರೀಫರು ಹಾಗೂ ಗುರು ಗೋವಿಂದಭಟ್ಟರ ಶಾಶ್ವತ ಚಿತ್ರಾತ್ಮಕ ರದ್ಧತಿ ಮುದ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಮುದ್ರೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಮಹನೀಯರ ಜೀವನ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ಇಂಥವರ ಶಾಶ್ವತ ಚಿತ್ರಾತ್ಮಕ ರದ್ಧತಿ ಮುದ್ರೆ ಬಿಡುಗಡೆ ಮಾಡಿದ್ದು ಅಂಚೆ ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ. ಆಸಕ್ತ ಅಂಚೆ ಚೀಟಿ ಸಂಗ್ರಹಕಾರರು ಹಾಗೂ ಇತರೆ ಸಾರ್ವಜನಿಕರು ತಮ್ಮ ಪತ್ರಗಳ ಅಂಚೆ ಚೀಟಿಗಳ ಮೇಲೆ ಈ ಮೊಹರನ್ನು ಹಾಕಿಸಿಕೊಳ್ಳಬಹುದು ಎಂದು ತಿಳಿಸಿದರು.
ಮಹಾವೀರ ಕುಂದೂರ ಚಿತ್ರಾತ್ಮಕ ಮುದ್ರೆ ಹಿನ್ನಲೆ ವಿವರಿಸಿದರು. ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರಕುಮಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಂಚಾಗ್ನಿ ಮಠದ ಟ್ರಸ್ಟಿ ಬಿ.ಆರ್.ಮಳಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಚೆ ನಿರೀಕ್ಷಕ ಮಂಜುನಾಥ ದೊಡ್ಡಮನಿ, ಅಂಚೆ ಸಹಾಯಕರಾದ ಪ್ರೇಮಾ ವಾಲಿ, ಪ್ರವೀಣ ಅವಘಾನ, ಶ್ರೀಧರ ಶಾಸ್ತ್ರೀ, ಅಂಚೆ ಪಾಲಕ ರವಿ ಯಲುವಿಗಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಚಂದ್ರಶೇಖರ ಸ್ವಾಗತಿಸಿದರು. ಹಾವೇರಿ ಅಂಚೆ ವಿಭಾಗದ ತರಬೇತುದಾರ ಸಾಧಿಕ ಬಂಕಾಪೂರ ನಿರೂಪಿಸಿದರು. ಶಿಕ್ಷಕ ಗುರುವಯ್ಯ ವಂದಿಸಿದರು.