

ಹಾವೇರಿ/ ಶಿಗ್ಗಾಂವಿ: ಶಿಗ್ಗಾಂವಿ ಪಟ್ಟಣದಲ್ಲಿ ಜೂ.24ರಂದು ನಡೆದಿದ್ದ ಗುತ್ತಿಗೆದಾರ ಶಿವಾನಂದ ಕುನ್ನೂರ ಹತ್ಯೆಯ ಐವರು ಆರೋಪಿತರನ್ನು ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದು, ಈ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಆರೋಪಿತರ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಶಿಗ್ಗಾಂವಿ ನಿವಾಸಿ ನಾಗರಾಜ ಪ್ರಕಾಶ ಸವದತ್ತಿ ಹಾಗೂ ಅಶ್ರಫ್‌ಖಾನ್ ಅಹ್ಮದ್‌ಖಾನ್ ಪಠಾಣ ಗುಂಡೇಟಿನಿಂದ ಗಾಯಗೊಂಡವರು. ಹನುಮರಳ್ಳಿಯ ಸುದೀಪ ಸುಭಾಸ ಹರಿಜನ, ಶಿಗ್ಗಾಂವಿಯ ವೀರೇಶ ಪ್ರಕಾಶ ಮಾವೂರ, ಸೂರಜ್ ಹಾಲೇಶ ಗೌಳಿ ಹಾಗೂ ಬನ್ನಿಕೊಪ್ಪದ ಶ್ರೀಕಾಂತ ಬಸವರಾಜ ಬಟ್ಟಿ ಬಂಧಿತ ಆರೋಪಿಗಳು.
ಆರೋಪಿತರ ಬಂಧನಕ್ಕೆ ನಾಲ್ಕು ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಸುಳಿವು ಪತ್ತೆ ಹಚ್ಚಿದ ಪೊಲೀಸರು ಹಾನಗಲ್ಲ ತಾಲೂಕು ಕೊಂಡಜ್ಜಿ ಕ್ರಾಸ್ ಬಳಿ ಬಂದಿಸಲು ಮುಂದಾಗಿದ್ದರು. ಈ ವೇಳೆ ಆರೋಪಿಗಳಾದ ನಾಗರಾಜ ಹಾಗೂ ಅಶ್ರಫ್ ಕಾನ್‌ಸ್ಟೆಬಲ್‌ಗಳಾದ ರವಿ ನಾವಿ ಹಾಗೂ ಹರೀಶ ಕರ್ಜಗಿ ಮೇಲೆ ಚಾಕು, ಕಲ್ಲಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದರು. ಶಿಗ್ಗಾಂವಿ ಇನ್‌ಸ್ಪೆಕ್ಟರ್ ಸತ್ಯಪ್ಪ ಮಾಳಗೊಂಡ ಹಾಗೂ ಹಾನಗಲ್ಲ ಪಿಎಸ್‌ಐ ಸಂಪತ್ ಆನೆಕಿವಿ ಎಚ್ಚರಿಕೆ ನೀಡಿದರೂ ಹಲ್ಲೆ ಮುಂದುವರಿಸಿದ್ದರು.
ಆಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಯಿತು. ನಾಗರಾಜನ ಎಡಗಾಲು ಹಾಗೂ ಅಶ್ರಫ್ ಬಲಗಾಲಿಗೆ ಗುಂಡು ತಗುಲಿ ಗಾಯಗೊಂಡರು. ಆರೋಪಿಗಳಿಬ್ಬರು ಹಾಗೂ ಪೇದೆಗಳಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿ, ಚಿಕಿತ್ಸೆ ಕೊಡಿಸಲಾಯಿತು. ವೈದ್ಯರ ಸಲಹೆ ಮೇರೆಗೆ ಆರೋಪಿತರನ್ನು ಕಿಮ್ಸ್‌ಗೆ ಕಳುಹಿಸಲಾಗಿದೆ. ಘಟನೆ ಕುರಿತು ಪಿಐ ಸತ್ಯಪ್ಪ ಹಾಗೂ ಪಿಎಸ್‌ಐ ಸಂಪತ್ ಆಡೂರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.
3 ಬೈಕಲ್ಲಿ ಪರಾರಿ, 3 ಕಾರಲ್ಲಿ ಸುತ್ತಾಟ ?
ಆರೋಪಿಗಳು ಶೀವಾನಂದ ಕುನ್ನೂರ ಹತ್ಯೆಗೈದ ನಂತರ ಮೂರು ಬೈಕ್‌ಗಳಲ್ಲಿ ಪರಾರಿಯಾಗಿದ್ದರು. ಶಿಗ್ಗಾಂವಿ ತಾಲೂಕು ಕೆಂಗಾಪುರ ಹಾಗೂ ಬನ್ನಿಕೊಪ್ಪ ಬಳಿ ಬೈಕ್ ಎಸೆದು, ಸ್ವಿಫ್ಟ್ ಕಾರನ್ನು ಬಾಡಿಗೆ ಮಾಡಿಕೊಂಡು ಉತ್ತರ ಕನ್ನಡ ಜಿಲ್ಲೆ ರಾಮನಗರ ಕಡೆ ಹೊರಟಿದ್ದರು. ನಂತರ ಅದೇ ಚಾಲಕನಿಂದ ಮತ್ತೊಬ್ಬ ಚಾಲಕನಿಗೆ ಕರೆ ಮಾಡಿಸಿ ಮತ್ತೊಂದು ಎರ್ಟಿಗಾ ಕಾರು ಬಾಡಿಗೆ ತರಿಸಿದ್ದರು. ಎರಡೂ ಕಾರಲ್ಲಿ ಹತ್ತಿ ಧಾರವಾಡ, ಸವದತ್ತಿ, ಮತ್ತಿತರ ಕಡೆಗಳಲ್ಲಿ ಸುತ್ತಾಡಿದ್ದರು. ಆಗ ಕಾರಿನ ಚಾಲಕನೊಬ್ಬ ಎಲ್ಲಿಗೆ ಹೋಗಬೇಕು ಸೀದಾ ಹೇಳಿ. ಅಲ್ಲಿಗೆ ಬಿಡುತ್ತೇನೆ ಎಂದು ಹೇಳಿದ್ದಾನೆ. ಆತನಿಗೆ ಕೊಲೆ ಮಾಡಿದ ವಿಡಿಯೋ ತೋರಿಸಿ ಬೆದರಿಸಿ, ಮತ್ತೆ ಮುಂದೆ ಸುತ್ತಾಡಿದ್ದಾರೆ. ಬಳಿಕ ಧಾರವಾಡ ಬಳಿ ಮತ್ತೊಂದು ಕ್ರೂಸರ್ ವಾಹನ ಬಾಡಿಗೆ ಪಡೆದು ದಾವಣಗೆರೆ ಕಡೆಗೆ ಹೋಗಿ, ಹಾನಗಲ್ಲ ಕಡೆಗೆ ಬಂದಾಗ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೃತ್ಯಕ್ಕೆ ಬಳಸಿದ 2 ಬೈಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.