

ಶಿಗ್ಗಾಂವಿ: ಪಟ್ಟಣದ ಗಂಗೆಬಾವಿ ಕ್ರಾಸ್ ಹತ್ತಿರ ಇರುವ ದ್ವಿಚಕ್ರ ವಾಹನದ ಮಳಿಗೆಯೊಂದರ ಬಳಿ ಮಂಗಳವಾರ ಹಾಡಹಗಲೇ ಕಾಂಗ್ರೆಸ್ ಮುಖಂಡ, ಪ್ರಥಮ ದರ್ಜೆ ಗುತ್ತಿಗೆದಾರನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪಟ್ಟಣದ ನಿವಾಸಿ ಶಿವಾನಂದ ಚನ್ನಬಸಪ್ಪ ಕುನ್ನೂರ (40) ಕೊಲೆಯಾದ ವ್ಯಕ್ತಿ. ತಾಲೂಕಿನಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡನಾಗಿ, ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಶಿವಾನಂದ ಕುನ್ನೂರ ಮಧ್ಯಾಹ್ನ 2.30ರ ಸುಮಾರು ಡಾಬಾ ಒಂದರಲ್ಲಿ ಊಟ ಮಾಡಿ ಹೊರಬಂದ ವೇಳೆ ನಾಲ್ಕೈದು ಹಂತಕರ ತಂಡ ಏಕಾಏಕಿ ದಾಳಿ ನಡೆಸಿ ಭೀಕರವಾಗಿ ಹತ್ಯೆಗೈದಿದ್ದಾರೆ. ಕುತ್ತಿಗೆಗೆ ತಲ್ವಾರ್‌ನಿಂದ ಕೊಚ್ಚಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಶಿಗ್ಗಾಂವಿ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶ್ವಾನದಳ ತಂಡ ಪರಿಶೀಲನೆ ನಡೆಸಿತು. ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಆಸ್ತಿ ಕಲಹ ಕಾರಣ ಎನ್ನಲಾಗಿದ್ದು, ಪೊಲೀಸ್ ತನಿಖೆಯಿಂದ ಸತ್ಯ ಬಯಲಾಗಬೇಕಿದೆ.