ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸುಧಾರಣೆಗೆ ಕ್ರಮ; ಸಚಿವ ಡಾ.ಎಂ.ಸಿ.ಸುಧಾಕರ ಹೇಳಿಕೆ

Dr MC Sudhakar
Published on

ಶಿಗ್ಗಾಂವಿ (ಗ್ರಾ): ಎಲ್ಲ ವಿಶ್ವವಿದ್ಯಾಲಯಗಳ ಅನುದಾನ ಬೇಡಿಕೆ ಇದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೆತೃತ್ವದಲ್ಲಿ ಉಪಸಮಿತಿ ರಚಿಸಲಾಗಿದೆ. ಈ ಸಭೆಯಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಸ್ಥಿತಿಗತಿಗಳ ಬಗ್ಗೆ ಸದೀರ್ಘ ಚರ್ಚೆ ನಡೆಸಿ ಇವುಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಭರವಸೆ ನೀಡಿದರು.

ಶಿಗ್ಗಾಂವಿ ತಾಲೂಕಿನ ಗೋಟಗೋಡಿಯ ಕರ್ನಾಟಕ ಜಾನಪದ ವಿವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ಹಲವು ಹೊಸ ವಿಶ್ವವಿದ್ಯಾಲಯಗಳನ್ನು ಕೊನೆಯ ದಿನಗಳಲ್ಲಿ ಸ್ಥಾಪಿಸಿದೆ. ಇದರಿಂದ ವಿಶ್ವವಿದ್ಯಾಲಯಗಳು ಆರ್ಥಿಕ ಪರಿಸ್ಥಿತಿ ಎದುರಿಸುತ್ತಿವೆ. ರಾಜ್ಯದ ಅನೇಕ ಹೆಸರಾಂತ ವಿಶ್ವವಿದ್ಯಾಲಯಗಳ ಪರಿಸ್ಥಿತಿ ಶೋಚನಿಯವಾಗಿದೆ. ಇವುಗಳ ಆರ್ಥಿಕ ಪರಿಸ್ಥಿತಿ ಕುಗ್ಗಿದೆ. ಇದಕ್ಕೆ ಹಲವಾರು ಕಾರಣಗಳಿಗೆ. ಕಳೆದ ವರ್ಷ ಧಾರವಾಡದ ವಿಶ್ವವಿದ್ಯಾಲಯಕ್ಕೆ ನಮ್ಮ ಸರ್ಕಾರ 40 ಲಕ್ಷ ರೂ. ಅನುದಾನ ನೀಡಿದೆ. ಈ ವರ್ಷ 20 ಕೋಟಿ ರೂ. ಅನುದಾನ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಜಾನಪದ ವಿಶ್ವವಿದ್ಯಾಲಯದ ಹೆಚ್ಚುವರಿ ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪರಿಶೀಲನೆ ಮಾಡುತ್ತೇವೆ. ನಮ್ಮ ಇಲಾಖೆಯಲ್ಲಿ ಸುಮಾರು 13ರಿಂದ 14 ಸಾವಿರ ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ನಾವು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಐದು ವರ್ಷದಲ್ಲಿ ಹಂತ ಹಂತವಾಗಿ ಭರ್ತಿ ಮಾಡುವ ಉದ್ದೇಶದಿಂದ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದರು.

ಜಾವಿವಿ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಇದ್ದರು.

ಅಕ್ರಮದ ಬಗ್ಗೆ ಪುರಾವೆ ಇಲ್ಲ

ಜಾನಪದ ವಿವಿ ನೇಮಕಾತಿಯಲ್ಲಿ ಆಕ್ರಮ ನಡೆದಿದೆ ಎನ್ನಲಾದ ಆರೋಪಕ್ಕೆ ಉತ್ತರಿಸಿದ ಸಚಿವರು, ನಮ್ಮ ಸರ್ಕಾರ ಬರುವುದಕ್ಕಿಂತ ಮೊದಲು ಇಲ್ಲಿ ನೇಮಕಾತಿ ನಡೆದಿದೆ. ನಾನು ಸಚಿವನಾದ ಮೇಲೆ ಈ ಬಗ್ಗೆ ದೂರು ಬಂದ ಬಳಿಕ ಇದನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದರು ಸಚಿವರು.

ಪಠಾಣಗೆ ನಿಯಮ ಗೊತ್ತಿಲ್ಲ

ಶಾಸಕ ಯಾಸೀರಖಾನ್ ಪಠಾಣ ಮತ್ತು ಬೆಂಬಲಿಗರು ಕುಲಪತಿಗಳ ಕಚೇರಿ ನುಗ್ಗಿ ದಾಂದಲೆ ಮಾಡಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಇತ್ತೀಚೆಗಷ್ಟೇ ಅವರು ಶಾಸಕರಾಗಿದ್ದಾರೆ. ಅವರಿಗೆ ವಿವಿ ಘಟಿಕೋತ್ಸವದ ನಿಯಮಗಳು ಗೊತ್ತಿಲ್ಲ. ಘಟಿಕೋತ್ಸವಕ್ಕೆ ಶಾಸಕ, ಸಂಸದ ಸೇರಿದಂತೆ ಯಾರಿಗೂ ವೇದಿಕೆಗೆ ಅವಕಾಶ ಇರುವುದಿಲ್ಲ. ರಾಜ್ಯಪಾಲರು, ನಾವು ಮತ್ತು ಸಿಂಡಿಕೇಟ್ ಸದಸ್ಯರು ಇರುವ ಶಿಷ್ಟಾಚಾರ ಇದೆ. ಇದು ಇಲ್ಲಿ ಮಾತ್ರವಲ್ಲ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಈ ನಿಯಮ ಇದೆ. ಶಾಸಕ ಮತ್ತು ಅವರ ಬೆಂಬಲಿಗರಿಗೆ ಮಾಹಿತಿ ಇಲ್ಲ. ನಾನು ಅವರ ಗಮನಕ್ಕೆ ತಂದು ಮಾತನಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net