

ಹಾವೇರಿ: ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯ ಎಂದು ಪ್ರಸಿದ್ಧಿ ಪಡೆದಿರುವ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ 8 ಮತ್ತು 9ನೇ ಘಟಿಕೋತ್ಸವ ಸಮಾರಂಭ ಡಿ.2ರಂದು ಜಾನಪದ ವಿವಿ ಆವರಣದ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ ಜರುಗಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಹಾಗೂ ವಿವಿಯ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಲಿದ್ದಾರೆ. ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ.ಟಿ.ವಿ.ಕಟ್ಟಿಮನಿ ಅತಿಥಿಗಳಾಗಿ ಪಾಲ್ಗೊಂಡು, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
2021-22ನೇ ಸಾಲಿನ 8ನೇ ಘಟಿಕೋತ್ಸವದಲ್ಲಿ 1 ಪಿಎಚ್‌ಡಿ, 3 ಚಿನ್ನದ ಪದಕ, 13 ಪ್ರಥಮ ರ‌್ಯಾಂಕ್ ಸೇರಿದಂತೆ ಒಟ್ಟು 216 ವಿದ್ಯಾರ್ಥಿಗಳಿಗೆ ಮತ್ತು 2022-23ನೇ ಸಾಲಿನ 9ನೇ ಘಟಿಕೋತ್ಸವದಲ್ಲಿ 3 ಪಿಎಚ್‌ಡಿ, 11 ಚಿನ್ನದ ಪದಕ, 14 ಪ್ರಥಮ ರ‌್ಯಾಂಕ್ ಸೇರಿದಂತೆ ಒಟ್ಟು 326 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು.
ಸುದ್ದದಿಗೋಷ್ಠಿಯಲ್ಲಿ ಜಾನಪದ ವಿವಿ ಕುಲಸಚಿವ ಪ್ರೊ.ಸಿ.ಟಿ.ಗುರುಪ್ರಸಾದ, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ.ಸಾಲಿ, ಸಹಾಯಕ ಕುಲಸಚಿವ ಡಾ.ಷಹಜಹಾನ್ ಮುದಕವಿ, ಡಾ.ವೆಂಕನಗೌಡ ಪಾಟೀಲ ಇದ್ದರು.
ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ
ಪ್ರಸಕ್ತ ಜಾನಪದ ವಿಶ್ವವಿದ್ಯಾಲಯಕ್ಕೆ ಇತ್ತೀಚೆಗೆ ಮಾಡಲಾದ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಈ ಆರೋಪ ಸುಳ್ಳು. ಸರ್ಕಾರದ ನಿಯಮಾವಳಿ ಮತ್ತು ಪರೀಕ್ಷಾ ನಿಯಮಗಳನ್ನು ಪಾಲಿಸಿ ಪಾರದರ್ಶಕವಾಗಿ ನೇಮಕಾತಿ ಮಾಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಸರ್ಕಾರದ ತನಿಖಾ ಸಮಿತಿ ಕೂಡ ಪರಿಶೀಲನೆ ನಡೆಸಿ ವರದಿ ನೀಡಿದ್ದು, ನೇಮಕಾತಿ ಪ್ರಕ್ರಿಯೆ ಸರಿಯಾದ ರೀತಿಯಲ್ಲೇ ನಡೆದಿದೆ ಎಂದೇ ವರದಿ ನೀಡದೆ ಎಂದು ಕುಲಪತಿ ಡಾ.ಟಿ.ಎಂ.ಭಾಸ್ಕರ ಸ್ಪಷ್ಟಪಡಿಸಿದರು.