

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರ, ರಾಣೆಬೆನ್ನೂರ, ಶಿಗ್ಗಾಂವಿ, ಸವಣೂರ ಪಟ್ಟಣ, ಬ್ಯಾಡಗಿ, ಗುತ್ತಲ, ಅಕ್ಕಿಆಲೂರ ಸೇರಿದಂತೆ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಬುಧವಾರ ಸಂಜೆ ಗಂಟೆಗಟ್ಟಲೆ ಭರ್ಜರಿ ಮಳೆ ಸುರಿಯಿತು.
ಸುಮಾರು ಒಂದು ಗಂಟೆ ರಭಸವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳ ತುಂಬ ನೀರು ಹರಿಯಿತು. ವಾಹನ ಸವಾರರು ಪರದಾಡಿದರು. ಚರಂಡಿಗಳು ಉಕ್ಕಿ ಹರಿದವು. ಮಳೆಯಿಂದಾಗಿ ಹಾವೇರಿ ನಗರದ ಪ್ರವಾಸಿ ಮಂದಿರದ ಎದುರು ರಸ್ತೆ ಮೇಲೆ ನೀರು ಹರಿಯಿತು. ಇದರಿಂದ ವಾಹನ ದಟ್ಟಣೆ ಉಂಟಾಗಿತ್ತು. ವಿವಿಧ ಊರುಗಳಿಗೆ ತೆರಳಲು ಬಸ್ ನಿಲ್ದಾಣಗಳಿಗೆ ಆಗಮಿಸಿದ್ದ ಪ್ರಯಾಣಿಕರು ಮಳೆಯಲ್ಲಿ ನೆನೆದರು.
ನದಿಯಂತಾದ ಶಿಗ್ಗಾಂವಿ ಸರ್ವಿಸ್ ರಸ್ತೆ
ಶಿಗ್ಗಾಂವಿ: ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಶಿಗ್ಗಾಂವಿ ಪಟ್ಟಣದ ಸರ್ವಿಸ್ ರಸ್ತೆಯಲ್ಲಿ ಮಳೆಯ ನೀರು ನದಿಯಂತೆ ಹರಿಯಿತು.
ಪಟ್ಟಂದ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದ ವರೆಗೆ ಸುಮಾರು ಒಂದು ಕಿಮೀವರೆಗೆ ಸರ್ವಿಸ್ ರಸ್ತೆ ಸಂಪೂರ್ಣ ಮಳೆ ನೀರಿನಿಂದ ಆವೃತವಾಗಿತ್ತು. ಇದರಿಂದ ಶಿಗ್ಗಾಂವಿ ಕಡೆಯಿಂದ ಹಾವೇರಿ, ಬೆಂಗಳೂರು ಕಡೆಗೆ ತೆರಳುವ ವಾಹನಗಳ ಸವಾರರು ಪರದಾಡಿದರು. ಮೊಣಕಾಲುದ್ದ ನೀರು ಹರಿಯುತ್ತಿದ್ದ ಪರಿಣಾಮ ಕಾರು, ಆಟೋ, ಬೈಕ್‌ಗಳು ಬಸ್ ನಿಲ್ದಾಣದತ್ತ ವಾಪಸಾದವು.