ಯತ್ನಳ್ಳಿ ಚರಂಡಿಯಲ್ಲಿ ಬ್ಯಾಲೆಟ್ ಬಾಕ್ಸ್ ಪತ್ತೆ; ಶಿಗ್ಗಾಂವಿ ಉಪಚುನಾವಣೆಯ ಮರುದಿನವೇ ಜನರಲ್ಲಿ ಗೊಂದಲ ಸೃಷ್ಟಿ

14 HVR 2 A
Published on

ಹಾವೇರಿ: ಶಿಗ್ಗಾಂವಿ ಉಪಚುನಾವಣೆಯ ಮರುದಿನವೇ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಬಳಿಯ ರಸ್ತೆಬದಿಯ ಕಾಲುವೆಯೊಂದರಲ್ಲಿ 10 ಬ್ಯಾಲೆಟ್ ಬಾಕ್ಸ್‌ಗಳು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರವಷ್ಟೇ ಮುಕ್ತಾಯಗೊಂಡಿದೆ. ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್‌ಗಳು ಸಿಕ್ಕಿವೆ. ಇದರಿಂದಾಗಿ ಸ್ಥಳೀಯ ಜನರಲ್ಲಿ ಹಲವು ಅನುಮಾನಗಳು ಕಾಡುತ್ತಿವೆ. ಆದರೆ, ಈ ಬ್ಯಾಲೆಟ್ ಬಾಕ್ಸ್‌ಗಳು ಹಳೆಯದ್ದಾಗಿವೆ. ಶಿಗ್ಗಾಂವಿ ಚುನಾವಣೆಗೂ ಈ ಬಾಕ್ಸ್‌ಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಜಿಲ್ಲಾಡಳಿತ ತಿಳಿಸಿದೆ.

’ಗುರುವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋಗಿದ್ದೆ. ಇದೇ ಸಂದರ್ಭದಲ್ಲಿ ಕಾಲುವೆಯಲ್ಲಿ ಕಬ್ಬಿಣದ ಬಾಕ್ಸ್‌ಗಳು ಕಂಡವು. ಏನೆಂದು ನೋಡಲು ಹೋದಾಗ, ಬ್ಯಾಲೆಟ್ ಬಾಕ್ಸ್‌ಗಳು ಎಂಬುದು ಗೊತ್ತಾಯಿತು. ಶಿಗ್ಗಾಂವಿ ಚುನಾವಣೆ ಸಂದರ್ಭದಲ್ಲೇ ಬ್ಯಾಲೆಟ್ ಬಾಕ್ಸ್‌ಗಳು ಈ ರೀತಿ ಕಾಲುವೆಯಲ್ಲಿ ಎಸೆದು ಹೋಗಿರುವುದು ಅಧಿಕಾರಿಗಳ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ. ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಯತ್ತಿನಹಳ್ಳಿ ಗ್ರಾಮಸ್ಥ ಅಬ್ದುಲ್ ಹುಬ್ಬಳ್ಳಿ ಒತ್ತಾಯಿಸಿದ್ದಾರೆ.

ಕಳ್ಳರ ಕರಾಮತ್ತು, ಕೇಸ್ ದಾಖಲು

ಯತ್ತಿನಹಳ್ಳಿ ಸಮೀಪದ ಎಪಿಎಂಸಿ ಗೋದಾಮಿನಲ್ಲಿ ಕಳೆದ 12 ವರ್ಷಗಳಿಂದ ಬ್ಯಾಲೆಟ್ ಬಾಕ್ಸ್‌ಗಳನ್ನು ಇಡಲಾಗಿದೆ. ಇವಿಎಂ ಯಂತ್ರ ಬಂದ ಮೇಲೆ ಇವುಗಳ ಬಳಕೆ ಕಡಿಮೆಯಾಗಿದೆ. 2020ರಲ್ಲಿ ಗ್ರಾಪಂ ಚುನಾವಣೆಗೆ ಬಳಸಲಾಗಿತ್ತು. ಬುಧವಾರ ರಾತ್ರಿ ಕಳ್ಳರು ಗೋದಾಮಿನ ಚಾವಿ ಮುರಿದು ಬ್ಯಾಲೆಟ್ ಬಾಕ್ಸ್ ಕದ್ದಿದ್ದಾರೆ. ನಂತರ ಯಾವುದೋ ಕಾರಣಕ್ಕೆ ಕಾಲುವೆಯಲ್ಲಿ ಎಸೆದು ಹೋಗಿದ್ದಾರೆ. ಈ ಕುರಿತು ಸ್ಥಳ ಪರಿಶೀಲನೆ ನಡೆಸಿ, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಿಗ್ಗಾಂವಿ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ಯಾವುದೇ ಅನುಮಾನಪಡುವ ಅಗತ್ಯವೂ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net