ಬೊಮ್ಮಾಯಿ ಅಭಿವೃದ್ಧಿ ಮಾಡಿದ್ದರೆ ತೋರಿಸಲಿ; ಕ್ಷೇತ್ರ ಬಿಟ್ಟು ಹೋಗುತ್ತೇವೆ; ಶಿಗ್ಗಾಂವಿ ಪ್ರಚಾರ ಕಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಸವಾಲು

DKShi 3
Published on

ಶಿಗ್ಗಾಂವಿ (ಗ್ರಾ): ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಬಡವರಿಗಾಗಿ ಒಂದಾದರೂ ಯೋಜನೆ ಜಾರಿ ಮಾಡಿದ್ದಾರಾ ? ಜಾರಿ ಮಾಡಿದ್ದರೆ ತೋರಿಸಲಿ. ನಾವೆಲ್ಲರೂ ಕ್ಷೇತ್ರ ಬಿಟ್ಟು ಹೋಗುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸವಾಲು ಹಾಕಿದರು.

ಶಿಗ್ಗಾಂವಿ ತಾಲೂಕಿನ ಹೋತನಹಳ್ಳಿ ಗ್ರಾಮದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಆಪರೇಷನ್ ಮಾಡಿ ಶಾಸಕರನ್ನು ತನ್ನತ್ತ ಸೆಳೆದಿದ್ದ ಬಿಜೆಪಿ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತು. ಜನರು, ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿ ಸೇವೆಗೆ ಅವಕಾಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಬರಲಿದೆ. ಬಿಜೆಪಿ ಸರ್ಕಾರ ಬರಲು ಸಾಧ್ಯವಿಲ್ಲ ಎಂದು ಹೇಳಿದರು.

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಆಶ್ರಯ, ಆರಾಧನಾ ಸೇರಿ ಹಲವು ಯೋಜನೆಗಳ ಮೂಲಕ ಬಡವರಿಗೆ ಮನೆ ನೀಡಿದರು. ದೇವರಾಜ ಅರಸರು, ಉಳುವವನೇ ಭೂಮಿ ಒಡೆಯ ಎಂದರು. ಇಂದಿರಾಗಾಂಧಿ ಪ್ರಧಾನಿಯಾದಾಗ, ಪಿಂಚಣಿ ವ್ಯವಸ್ಥೆ ಬಂತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ, ಅನ್ನಭಾಗ್ಯ, ಕ್ಷೀರ ಭಾಗ್ಯ ಹಾಗೂ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಬಿಜೆಪಿ ಯಾವ ಕೊಡುಗೆಯೂ ಕೊಟ್ಟಿಲ್ಲ ಎಂದರು.

ಈ ಕ್ಷೇತ್ರದಲ್ಲಿ 17 ವರ್ಷಗಳಿಂದ ಬೊಮ್ಮಾಯಿ ಮನೆತನದ ಆಡಳಿತವಿದೆ. ಈ ಬಾರಿ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಬೊಮ್ಮಾಯಿ ಮನೆತನವನ್ನು ಕಿತ್ತುಹಾಕಬೇಕು ಎಂದು ಕರೆ ನೀಡಿದರು.

ಬಿಜೆಪಿಯವರು ಹಿಂದೂಮುಸ್ಲಿಂರ ನಡುವೆ ಜಗಳ ಹಚ್ಚುತ್ತಾರೆ. ಹಿಂದೂ ಮುಂದು ಎಂದು ಹೇಳಿಕೊಂಡು ಓಡಾಡುತ್ತಾರೆ. ಆದರೆ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಲಿಂಗಾಯತ ಹಾಗೂ ನಾವೆಲ್ಲರೂ ಒಂದು ಎಂದು ನಾವು ಹೇಳುತ್ತೇವೆ. ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ, ಸರ್ಕಾರಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ತಿಳಿಸಿದರು.

ನನ್ನ ತಮ್ಮನಿಗೆ ಟಿಕೆಟ್ ಕೊಡಿಸಬಹುದಿತ್ತು

ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಅವರ ಮಗ ಬಸವರಾಜ ಬೊಮ್ಮಾಯಿ ಸಹ ಮುಖ್ಯಮಂತ್ರಿಯಾದರು. ಈಗ ಮೊಮ್ಮಗ ಸಹ ಚುನಾವಣೆಗೆ ನಿಂತಿದ್ದಾನೆ. ನನಗೆ ಟಿಕೆಟ್ ಬೇಡ ಎನ್ನುತ್ತಲೇ ಬೊಮ್ಮಾಯಿ, ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. ನಾನು ಸಹ ಚನ್ನಪಟ್ಟಣದಲ್ಲಿ ನನ್ನ ತಮ್ಮನಿಗೆ ಟಿಕೆಟ್ ಕೊಡಿಸಬಹುದಿತ್ತು. ಆದರೆ, ಕೊಡಿಸಲಿಲ್ಲ. ಬಿಜೆಪಿ ಸಹವಾಸ ಸಾಕೆಂದು ಪಕ್ಷಕ್ಕೆ ಬಂದವರಿಗೆ ಟಿಕೆಟ್ ಕೊಟ್ಟಿದ್ದೇನೆ. ಬಿಜೆಪಿ ಬಿಟ್ಟು ಬಂದಿರುವ ಅವರು ದಡ್ಡರಾ ಎಂದು ಡಿ.ಕೆ. ಶಿವಕುಮಾರ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net